
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಜನರಿಗೆ ಹರ್ಷ ತಂದಿದೆ. ಮುಂಗಾರು ಮಳೆಯೂ ಉತ್ತಮವಾಗಿ ಬರುವ ನಿರೀಕ್ಷೆ ಇದೆ. ಬೊಂಬಿನ ಮೇಲಿನ ನಡೆದು ಸಾಗಬೇಕಿರುವ ಜನರಲ್ಲಿ ಆತಂಕ ಉಳಿದುಕೊಂಡಿದೆ. ಶೃಂಗೇರಿ, ಎನ್.ಆರ್.ಪುರ, ಕೊಪ್ಪ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಮರದ ಬೊಂಬಿನ ಮೇಲೆ ಸಾಗಿ ಮನೆ ತಲುಪಬೇಕಾದ ಜನವಸತಿಗಳು ಇಂದಿಗೂ ಸಾಕಷ್ಟಿವೆ. ಮರದ ದಿಮ್ಮಿ, ಕಟ್ಟಿಗೆ, ಹಲಗೆ, ಬಿದಿರು ಬಳಸಿ ಜನರೇ ಕಾಲುಸಂಕಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಹಳ್ಳ, ತೊರೆ, ಹೊಳೆಗಳು ಉಕ್ಕಿ ಹರಿಯುತ್ತವೆ. ಈ ಮರದ ಸಂಕಗಳು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳು ಹೆಚ್ಚು.

j3tvkannada
ತೀರ್ಥಹಳ್ಳಿ ತಾಲ್ಲೂಕಿನ ಶಾಲಾ ಬಾಲಕಿ ಮತ್ತು ವ್ಯಕ್ತಿಯೊಬ್ಬರು ಕಾಲಸಂಕ ದಾಟುವಾಗ 2006ರಲ್ಲಿ ಹಳ್ಳಕ್ಕೆ ಬಿದ್ದಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಎಂಬ ಯೋಜನೆ ರೂಪಿಸಿ ಹಣವನ್ನೂ ಬಿಡುಗಡೆ ಮಾಡಿದ್ದರು. 2019-20ನೇ ಸಾಲಿನ ಬಜೆಟ್ನಲ್ಲಿ ರಾಜ್ಯದಲ್ಲಿ 1,317 ಕಿರು ಸೇತುವೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಕಾಲುಸಂಕಗಳು ನಿರ್ಮಾಣವಾಗಿವೆ. ಈ ವರ್ಷವನ್ನೂ 200 ಸಂಕಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕ್ರಿಯಾ ಯೋಜನೆಯೂ ರೂಪುಗೊಂಡಿದೆ. ಇನ್ನೂ ಕೆಲವೆಡೆ ಜಾಗದ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕೆಲವೆಡೆ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಆದ್ದರಿಂದ ಕಾಲು ಸಂಕಗಳನ್ನು ದಾಟಿ ಜೀವನ ನಡೆಸಬೇಕಾದ ಸ್ಥಿತಿ ಮಲೆನಾಡಿನಲ್ಲಿ ಇನ್ನೂ ಇದೆ.