
ಟೇಲರಿಂಗ್ ಮಾಡಿ ಕಾಲೇಜಿನ ಶುಲ್ಕ ಪಾವತಿಸಿದ್ದ ಮಸ್ಕಿ ತಾಲ್ಲೂಕಿನ ಜಂಗಮರಹಳ್ಳಿ ಗ್ರಾಮದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

j3tvkannada
ರಾಯಚೂರು: ಗ್ರಾಮದ ಲಕ್ಷ್ಮಿ ಹಾಗೂ ಅಯ್ಯಣ್ಣ ದಂಪತಿ ಅವಳಿ ಪುತ್ರಿಯರಲ್ಲಿ ಸ್ನೇಹಾ ಶೇ 95 ಅಂಕ ಪಡೆದು ಮಸ್ಕಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದರೆ, ಸಿಂಧು ಶೇ 94ರಷ್ಟು ಅಂಕ ಪಡೆದಿದ್ದಾರೆ. ಜಂಗಮರಹಳ್ಳಿಯ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯವರೆಗೆ ಹಾಗೂ 9, 10ನೇ ತರಗತಿಯನ್ನು ಮಸ್ಕಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಸಹೋದರಿಯರು ಹತ್ತನೇ ತರಗತಿಯಲ್ಲೂ ಕ್ರಮವಾಗಿ ಶೇ 95 ಮತ್ತು ಶೇ 94 ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯುಸಿಯಲ್ಲೂ ಅದೇ ಪರಂಪರೆ ಮುಂದುವರಿಸಿದ್ದಾರೆ. ಕುಟುಂಬದ ಬಡತನ ಪರಿಸ್ಥಿತಿ, ಹಣಕಾಸಿನ ತೊಂದರೆಯಿಂದ ಹತ್ತನೇ ತರಗತಿ ಪೂರೈಸಿದ ನಂತರ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿಯೇ ಟೇಲರಿಂಗ್ ಮಾಡುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದರು. ಬಾಲಕಿಯರ ಕಲಿಕಾ ಆಸಕ್ತಿ ಗುರುತಿಸಿದ ಹಾಲಾಪುರದ ಜನನಿ ಖಾಸಗಿ ಕಾಲೇಜಿನ ಪ್ರಾಚಾರ್ಯರು ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಪಾಲಕರ ಮನವೊಲಿಸಿ ಕಾಲೇಜಿಗೆ ಪ್ರವೇಶ ನೀಡಿದ್ದರು.
ಬಾಲಕಿಯರ ಸಾಧನೆಗೆ ಮೆಚ್ಚುಗೆ ಸೂಚಿಸಿರುವ ಪ್ರಾಚಾರ್ಯ ನಾಗೇಶ, ನಮ್ಮ ನಿರೀಕ್ಷೆಯನ್ನು ಮಕ್ಕಳು ಹುಸಿಗೊಳಿಸಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.