
ನವದೆಹಲಿ : 2047ನೇ ಇಸವಿ ಭಾರತಕ್ಕೆ ಒಂದು ಮೈಲಿಗಲ್ಲು. ಭಾರತಕ್ಕೆ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮ. ಅಷ್ಟರೊಳಗೆ ಭಾರತ ಮುಂದುವರಿದ ದೇಶವಾಗಬೇಕು ಎನ್ನುವುದು ಸರ್ಕಾರದ ಮಹತ್ವಾಕಾಂಕ್ಷಿ ಗುರಿ. ಈ ವಿಚಾರದಲ್ಲಿ ವಿವಿಧ ಅಭಿಪ್ರಾಯ ಭೇದಗಳಿವೆ. ಕೆಲವರು ಭಾರತ ಇಷ್ಟು ಬೇಗ ಮುಂದುವರಿದ ದೇಶವಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ಇನ್ನೂ ಕೆಲವರು, ಉನ್ನತ ಆದಾಯದ ದೇಶವಾಗಬಹುದು ಎಂದೂ ಹೇಳುತ್ತಾರೆ.
ಭಾರತ 2047ರೊಳಗೆ ಶ್ರೀಮಂತ ದೇಶವಾಗಬೇಕೆಂದರೆ ಅದರ ಜಿ.ಎನ್.ಐ ತಲಾ ಆದಾಯ ಎಂಟು ಪಟ್ಟು ಹೆಚ್ಚಾಗಬೇಕು. ಮುಂದಿನ 22 ವರ್ಷ ಭಾರತದ ಜಿ.ಡಿ.ಪಿ ಸರಾಸರಿ ಶೇ. 7.8ರ ದರದಲ್ಲಿ ಬೆಳೆಯಬೇಕು ಎನ್ನುತ್ತದೆ. ವಿಶ್ವಬ್ಯಾಂಕ್. ಮುಂಬರುವ ವರ್ಷಗಳಲ್ಲಿ ಹೂಡಿಕೆ, ಉದ್ಯೋಗ, ಉತ್ಪನ್ನಶೀಲತೆ ಹೆಚ್ಚಾಗಬೇಕು. ಮೂಲ ಸೌಕರ್ಯಗಳು ಮತ್ತಷ್ಟು ಸುಧಾರಣೆಗೊಳ್ಳಬೇಕು ಎಂಬ ಕೆಲವು ಸಲಹೆಗಳನ್ನು ವಿಶ್ವಬ್ಯಾಂಕ್ ನೀಡಿದೆ.

ಒಂದು ದೇಶವು ಉನ್ನತ ಆದಾಯದ ದೇಶ ಎನಿಸಿಕೊಳ್ಳಬೇಕಾದರೆ ಪ್ರಮುಖ ಮಾನದಂಡವೆಂದರೆ ಅಲ್ಲಿ ತಲಾ ಆದಾಯ ಮಟ್ಟವು ಹೆಚ್ಚಾಗಬೇಕು. ವಿಶ್ವಬ್ಯಾಂಕ್ ಪ್ರಕಾರ ಜಿ.ಎನ್.ಐ ತಲಾ ಆದಾಯ ಕನಿಷ್ಠ 14,005 ಡಾಲರ್ ಇರಬೇಕು. ದೇಶದ ಒಬ್ಬ ವ್ಯಕ್ತಿಯ ಸರಾಸರಿ ಆದಾಯ ಎಷ್ಟೆಂಬುದನ್ನು ಇದು ಸೂಚಿಸುತ್ತದೆ. ಭಾರತದ ಜಿ.ಎನ್.ಐ ತಲಾ ಆದಾಯ 2,500 ಡಾಲರ್ ಆಸುಪಾಸಿನ ಮಟ್ಟದಲ್ಲಿ ಇದೆ. ಇದು ಕನಿಷ್ಠ ಎಂಟು ಪಟ್ಟಾದರೂ ಹೆಚ್ಚಾಗಬೇಕು. ವಿಶ್ವಬ್ಯಾಂಕ್ ಪ್ರಕಾರ ಭಾರತ 2047ರೊಳಗೆ ಹೈ ಇನ್ಕಮ್ ದೇಶ ಎನಿಸಬೇಕಾದರೆ ವರ್ಷಕ್ಕೆ ಸರಾಸರಿ ಶೇ. 7.8ರ ದರದಲ್ಲಿ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಆದಾಯ ಮಟ್ಟದ ದೇಶ ಎನಿಸಬಹುದು. 2000 ವರ್ಷದಿಂದ 2024ರವರೆಗೂ ಭಾರತದ ಆರ್ಥಿಕ ಬೆಳವಣಿಗೆಯ ಸರಾಸರಿ ವೇಗ ಶೇ.6.3ರಷ್ಟಿದೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಬೆಳವಣಿಗೆ ಸಾಧ್ಯವಾದಲ್ಲಿ ಗುರಿ ಮುಟ್ಟಲು ಸಾಧ್ಯ ಎನ್ನುವುದು ತಜ್ಞರ ಅನಿಸಿಕೆ.
ವಿಶ್ವಬ್ಯಾಂಕ್ ಸಲಹೆ:
೧. ಮುಂದಿನ 22 ವರ್ಷ ಭಾರತದ ಜಿ.ಡಿ.ಪಿ ದರ ಸರಾಸರಿ ಶೇ. 7.8ರಷ್ಟಿರಬೇಕು.
೨. ಒಟ್ಟಾರೆ ಹೂಡಿಕೆಯು ಸದ್ಯ ಜಿ.ಡಿ.ಪಿ.ಯ ಶೇ. 33.5ರಷ್ಟಿದೆ. 2035ರೊಳಗೆ ಇದು ಶೇ. 40ಕ್ಕೆ ಏರಿಕೆ ಆಗಬೇಕು.
೩. ಕಾರ್ಮಿಕರು, ಅಥವಾ ಉದ್ಯೋಗಿಗಳ ಪ್ರಮಾಣ ಈಗ ಶೇ. 56.4 ಇದೆ. ಇದು ಶೇ. 65ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಏರಬೇಕು. ಮಹಿಳಾ ಉದ್ಯೋಗಿಗಳು ಹೆಚ್ಚಾಗಬೇಕು.
೪. ಎಲ್ಲಾ ಸೆಕ್ಟರ್ಗಳಲ್ಲೂ ಉತ್ಪನ್ನಶೀಲತೆ ಹೆಚ್ಚುವಂತಾಗಲು ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರಬೇಕು.
೫. ಆಮದು ಸುಂಕವನ್ನು ಇಳಿಸಬೇಕು. ಮುಕ್ತ ವ್ಯಾಪಾರಕ್ಕೆ ಉತ್ತೇಜನ ನೀಡಬೇಕು.
೬. ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬೇಕು. ಉದ್ಯಮ ಮತ್ತು ವ್ಯವಹಾರಗಳಿಗೆ ಆಡಳಿತಾತ್ಮಕ ಸಂಕೀರ್ಣ ನಿಯಮಗಳು ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸರಳ ಆಡಳಿತ ವ್ಯವಸ್ಥೆ ಇರಬೇಕು.
೭. ರಸ್ತೆ, ರೈಲ್ವೆ, ಬಂದರು, ಏರ್ಪೋರ್ಟ್ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಅನ್ನು ಉತ್ತಮಪಡಿಸುವುದರಿಂದ ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ಉದ್ದಿಮೆಗಳನ್ನು ಆಕರ್ಷಿಸಬಹುದು. ಭಾರತವು ಜಾಗತಿಕ ಸರಬರಾಜು ಸರಪಳಿಯ ಪ್ರಮುಖ ಭಾಗವಾಗಬಹುದು.