
ತುಮಕೂರು: ಕುಣಿಗಲ್ ತಾಲ್ಲೂಕಿನಲ್ಲಿ ನಾನಾ ಕಾರಣಗಳಿಂದ ಸರ್ಕಾರಿ ಶಾಲೆಗಳು ಮುಚ್ಚಿಹೋಗಿರುವ, ಮುಚ್ಚಲಿರುವ ಹಂತದಲ್ಲಿದ್ದರೆ ಗ್ರಾಮೀಣ ಭಾಗದ ಕಟ್ಟಿಗೆಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿ ಮಿಂದು ಗ್ರಾಮಸ್ಥರ ಸಂತೋಷಕ್ಕೆ ಕಾರಣವಾಗಿದೆ.

j3tvkannada
1925 ತಾಲ್ಲೂಕಿನ ಕಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಗೆಹಳ್ಳಿ ಕುಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾದ ದಾಖಲೆ ಲಭ್ಯವಿದ್ದರೂ, ನಿರ್ವಹಣೆಯ ಕೊರತೆಯಿಂದ 1930 ಶಾಲಾ ದಾಖಲಾತಿ ಬಗ್ಗೆ ದಾಖಲೆಗಳು ಲಭ್ಯವಾಗಿದೆ. 2017-18 ಸಾಲಿಗೆ 36 ವಿದ್ಯಾರ್ಥಿಗಳಿದ್ದರೂ, ಪ್ರಸ್ತುತ 8 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಶಿಕ್ಷಕಿಯರಿದ್ದು, ಒಬ್ಬರನ್ನು ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಮೂರು ಕೊಠಡಿಗಳ ಪೈಕಿ ಒಂದು ಪಂಚಾಯಿತಿಯಿಂದ ನವೀಕೃತಗೊಂಡು ಸುಸ್ಥಿತಿಯಲ್ಲಿದ್ದರೆ, ಇನ್ನೊಂದು ಶಿಥಿಲವಾಗಿದ್ದು ತೆರವಿಗೆ ಮನವಿ ಸಲ್ಲಿಸಲಾಗಿದೆ. ಶಾಲೆ ಶತಮಾನ ಕಂಡ ಕಾರಣ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಶನಿವಾರ ಶತಮಾನೋತ್ಸವ ಸಮಾರಂಭ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಗತಿಗೆ ಶ್ರಮಿಸಿದ ಗ್ರಾಮದ ಹಿರಿಯರನ್ನು, ನಿವೃತ್ತ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.