
ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ದುಬಾರಿಯಾಗಿದ್ದು ಉಳಿದ ರಾಷ್ಟ್ರೀಯ ಹೆದ್ದಾರಿ 48, 75 ಹಾಗೂ 4 ರ ನವಯುಗ, ದೇವಿಹಳ್ಳಿ ಟೋಲ್ ದರವೂ ಜೂನ್ ನಂತರ ಹೆಚ್ಚಳವಾಗಲಿದೆ ಎಂದು ಟೋಲ್ ಅಧಿಕಾರಿಗಳು ತಿಳಿಸಿದ್ದು, ವಾಹನ ಸವಾರರು ಕಂಗಾಲಾಗುವಂತೆ ಮಾಡಿದೆ. ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಹೆಚ್ಚಳ ದಿಂದ ವಾಹನ ಸವಾರರು ಬಹಳಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ದಾಬಸ್ಪೇಟೆಯಿಂದ ಹೊಸಕೋಟೆಯ ಎಸ್ಟಿಆರ್ಆರ್ ಹೆದ್ದಾರಿ ಹಾಗೂ ಎನ್.ಎಚ್ 7ರ ಸಾದಹಳ್ಳಿ ಗೇಟ್ನ ಟೋಲ್ ದರ ಏರಿಕೆಯಾಗಿದ್ದು ತುಮಕೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕ, ಚಿಕ್ಕಬಳ್ಳಾಪುರ ಕಡೆಯಿಂದ ಬರುತ್ತಿದ್ದ ವಾಹನ ಸವಾರರು, ಮಾಲೀಕರಿಗೆ ಪೆಟ್ಟಿನ ಮೇಲೆ ಪೆಟ್ಟು ಬಿದ್ದಂತಾಗಿದೆ.

ಜಿಲ್ಲೆಯ ಎರಡು ಹೆದ್ದಾರಿಗಳ ಟೋಲ್ ದರ ಈಗಾಗಲೇ ಹೆಚ್ಚಳವಾಗಿದ್ದು ಜೂನ್ ನಂತರ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ 75ರ ಟೋಲ್ ದರ, ನೆಲಮಂಗಲ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರ ಟೋಲ್ ದರ, ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಜಾಸ್ ಟೋಲ್ ದರ ಹೆಚ್ಚಳವಾಗಲಿದೆ ಎಂಬುದನ್ನು ಟೋಲ್ ಅಧಿಕಾರಿಗಳು ಖಾತರಿ ಮಾಡಿದ್ದು, ವಾಹನ ಸವಾರರಿಗೆ ಮತ್ತಷ್ಟು ಹೊರೆಯಾಗುವುದು ಖಚಿತ. ಬೆಂಗಳೂರು ಹಾಗೂ ಏರ್ಪೋರ್ಟ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ದುಬಾರಿಯಾಗಿರುವ ಪರಿಣಾಮ ಖಾಸಗಿ ಬಸ್ಗಳು, ಟ್ಯಾಕ್ಸಿ , ಮಿನಿ ಬಸ್ಗಳ ದರವೂ ಹೆಚ್ಚಳ ಮಾಡುವ ಚಿಂತನೆಯನ್ನು ವಾಹನ ಮಾಲೀಕರು ನಿರ್ಧಾರ ಮಾಡಿದ್ದು ಕೆಲವರು ಈಗಾಗಲೇ ಹೆಚ್ಚಿನ ದರವನ್ನೂ ಪಡೆದುಕೊಳ್ಳುತ್ತಿದ್ದಾರೆ. ಟೋಲ್ ಶುಲ್ಕ ಹೆಚ್ಚಳದಿಂದ ಜನರ ಜೇಬಿಗೆ ಕತ್ತರಿಬಿದ್ದಂತಾಗಿದೆ.