
ಬೆಳಗಾವಿ: ರಾಮದುರ್ಗದ ಸುತ್ತಲೂ ಇರುವ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ವಿರಳ ಬಣ್ಣದ ಚಿಟ್ಟುಕೋಳಿ ಪತ್ತೆಯಾಗಿದೆ.

ಈ ಕೋಳಿಗೆ ಇಂಗ್ಲಿಷ್ನಲ್ಲಿ ‘ಪೆಂಟೆಡ್ ಸ್ಪಲ್’ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ‘ಗ್ಯಾಲೋಪರ್ಡಿಕ್ಸ್ ಲುನುಲಾಟಾ’. ಬೆಟ್ಟಗಳ ಪೊದೆ ಪ್ರದೇಶದಲ್ಲಿ ಇರುವ ಈ ಹಕ್ಕಿಯು ತುಂಬಾ ಸೂಕ್ಷ್ಮ ಮತ್ತು ನಾಚಿಕೆಯುಳ್ಳದ್ದು. ಗೋಚರಿಸುವುದು ವಿರಳ ‘ಈ ಹಕ್ಕಿಯು ಫೆಸಂಟ್ ಕುಟುಂಬಕ್ಕೆ ಸೇರಿದೆ. ಗಂಡು ಹಕ್ಕಿಗಳು ಹೆಚ್ಚು ಪ್ರಕಾಶಮಾನವಾದ ಬಣ್ಣ ಹೊಂದಿದ್ದರೆ, ಹೆಣ್ಣು ಹಕ್ಕಿಗಳು ಗಂಡಿಗಿಂತ ಮಂದ ವರ್ಣ ಹೊಂದಿರುತ್ತವೆ. ತುಂಬಾ ವೇಗವಾಗಿ ಓಡುತ್ತವೆ. ಗಂಡು ಹಕ್ಕಿಗೆ ಕಪ್ಪು ಬಾಲವಿದೆ. ಗರಿಗಳ ಪುಕ್ಕಗಳು ಕಪ್ಪು ವರ್ಣದಿಂದ ಅಂಚಿನಲ್ಲಿ ಬಿಳಿ ಚುಕ್ಕೆಗಳನ್ನು ಹೊಂದಿದೆ. ತಲೆ ಮತ್ತು ಕುತ್ತಿಗೆ ಹಸಿರು ಹೊಳಪಿನೊಂದಿಗೆ ಕೂಡಿದೆ. ಕೆಂಪಗಿನ ಹುಬ್ಬು ಮತ್ತು ಕಿವಿಯ ಹೊದಿಕೆಗಳನ್ನು ಹೊಂದಿದೆ. ಹೆಣ್ಣಿನ ದೇಹದ ಮೇಲೆ ಬಿಳಿ ಚುಕ್ಕೆ ಇರುವುದಿಲ್ಲ. ಕೊಕ್ಕು ಮತ್ತು ಕಾಲುಗಳು ಗಾಢ ಬೂದು ವರ್ಣ ಇರುತ್ತದೆ. ಗಂಡಿನ ಕಾಲುಗಳ ಮೇಲೆ ನಾಲ್ಕು ಬಾಚಣಿಕೆಯ ಹಲ್ಲಿನ ರಚನೆ ಹೊಂದಿವೆ (ಸ್ಪರ್). ಆದರೆ, ಹೆಣ್ಣು ಹಕ್ಕಿಗಳಿಗೆ ಒಂದು ಅಥವಾ ಎರಡು ಸ್ಪರ್ಗಳು ಇರುತ್ತವೆ.