ಕನ್ನಡಿಗರ ಮೇಲೆ ಮರಾಠಿಗರ ದಬ್ಬಾಳಿಕೆ ಖಂಡಿಸಿ ಮತ್ತು ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಾ.22 ಶನಿವಾರ ‘ಕರ್ನಾಟಕ ಬಂದ್’ಗೆ ಕರೆ ನೀಡಿವೆ.

ಇಂದು ಬೆಂಗಳೂರಿನಲ್ಲಿ ವಿವಿಧ ಕನ್ನಡ ಸಂಘಟನೆಗಳು ಸಭೆ ಸೇರಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಮಾ.22 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ರವರು ಮಾ.3 ರಂದು ಬೆಳಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ ಹಾಕಲಿದ್ದೇವೆ, ಮಾ.7ಕ್ಕೆ ಬೆಳಗಾವಿ ಚಲೋ ಕೈಗೊಳ್ಳುತ್ತೇವೆ, ಮಾ.11 ರಂದು ಮೇಕೆದಾಟು ಯೋಜನೆಗೆ ಆಗ್ರಹಿಸಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ, ಹಾಗೂ ಮಾ.14 ರಂದು ಮೈಸೂರು, ಮಂಡ್ಯ, ರಾಮನಗರ, ಡಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು. ಎಂಇಎಸ್ ನಿಷೇಧ ಮಾಡಿ ಶಿವಸೇನೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಸಾಂಬಾಜಿ ಪ್ರತಿಮೆ ತೆರವು ಮಾಡಬೇಕು. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.