
ಚಿಕ್ಕಮಂಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಹೆಬ್ಬೆ ಜಲಪಾತ, ಬಾಬಾ ಬುಡನ್ಗಿರಿ, ಕಲ್ಲತ್ತಿಗಿರಿ ಜಲಪಾತ, ಭದ್ರಾ ವನ್ಯಜೀವಿ ಅಭಯಾರಣ್ಯ, ಗುಂಡಿ ಜಲಪಾತದಂತಹ ಅದ್ಭುತ ಪ್ರವಾಸಿ ಆಕರ್ಷಣೆಗಳು ಇಲ್ಲಿವೆ. ಈ ಮಾನ್ಸೂನ್ನಲ್ಲಿ ಜನರು ಹೆಚ್ಚಾಗಿ ಎತ್ತಿನಭುಜ ಶಿಖರಕ್ಕೆ ಭೇಟಿ ನೀಡುತ್ತಿದ್ದಾರೆ. ಕಾರಣ, ಈ ಸ್ಥಳದ ಸೌಂದರ್ಯವು ದುಪ್ಪಟ್ಟಾಗಿದ್ದು, ನೋಡುಗರನ್ನು ಮಂತ್ರಮುಗ್ಧವಾಗಿಸಿದೆ.

j3tvkannada.in
ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಜನರು ಹೆಚ್ಚು ಹೆಚ್ಚು ಎತ್ತಿನಭುಜ ಶಿಖರಕ್ಕೆ ಹೋಗುತ್ತಿದ್ದಾರೆ. ಈ ಸ್ಥಳವು ಟ್ರೆಕ್ಕಿಂಗ್ಗೆ ಬಹಳ ಜನಪ್ರಿಯವಾಗಿದ್ದು, ಸಾಹಸಿಗರಿಗೆ, ಪ್ರಕೃತಿ ಪ್ರೇಮಿಗಳಿಗೆ ರಸದೌತಣವನ್ನು ನೀಡುತ್ತದೆ. ಮಾನ್ಸೂನ್ನಲ್ಲಿ ಈ ಸ್ಥಳವು ಮೋಡಿ ಮಾಡುತ್ತದೆ. ಹಿಮ ಶಿಖರದಂತಿರುವ ಈ ಬೆಟ್ಟವು ಟ್ರೆಕ್ಕಿಂಗ್ ಮಾಡುವವರಿಗೆ ಸ್ವರ್ಗದಂತಹ ಅನುಭೂತಿಯನ್ನು ನೀಡುತ್ತದೆ. ಈ ಸೊಗಸಾದ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 1299 ಮೀಟರ್ ಎತ್ತರದಲ್ಲಿದೆ. ಎತ್ತಿನ ಭುಜ ಎಂದರೆ ಎತ್ತಿನ ಬೆನ್ನು ಎಂದೇ ಆಗಿದೆ. ಕಾರಣ, ಈ ಬೆಟ್ಟವು ನೋಡಲು ಎತ್ತಿನ ಬೆನ್ನಿನಂತೆ ಕಾಣುತ್ತದೆ.
ಎತ್ತಿನ ಭುಜ ಶಿಖರವು ಮಧ್ಯಮ ಮಟ್ಟದ ಟ್ರೆಕ್ಕಿಂಗ್ ಸ್ಥಳವಾಗಿ ಹೆಸರುವಾಸಿಯಾಗಿದೆ. ನೀವು ಈಗಾಗಲೇ ಅನೇಕ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಮಾಡಿದ್ದರೆ, ಈ ಎತ್ತಿನ ಭುಜ ಶಿಖರಕ್ಕೆ ಹೋಗಬಹುದು. ಈ ಚಾರಣವು 4 ರಿಂದ 5 ಕಿ.ಮೀ ದೂರವನ್ನು ಹೊಂದಿದ್ದು, 2 ರಿಂದ 3 ಗಂಟೆಗಳ ಕಾಲ ಸಾಗಬೇಕಾಗುತ್ತದೆ. ಇಲ್ಲಿ ಟ್ರೆಕ್ಕಿಂಗ್ ಮಾಡಲು ಬೇಸಿಗೆ ಉತ್ತಮ ಕಾಲವಾಗಿದ್ದರೂ, ಮಾನ್ಸೂನ್ ಮತ್ತು ಚಳಿಗಾಲದಲ್ಲಿ ಶಿಖರದ ಸೊಬಗು ಗಗನಕ್ಕೇರುತ್ತದೆ. ಈ ಕಾರಣದಿಂದಲೇ ಜನರು ಈ ಋತುವಿನಲ್ಲಿ ಟ್ರೆಕ್ಕಿಂಗ್ ಯೋಜಿಸುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ಚಾರಣ ಹೆಚ್ಚು ಸವಾಲಿನಿಂದ ಕೂಡಿರುತ್ತದೆ.
ಒಂದು ಕಡೆ ಉಡುಪಿ, ಮಂಗಳೂರಿನ ಕಡಲ ತೀರಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹಾಕುತ್ತಿದ್ದರೆ, ಇನ್ನೊಂದೆಡೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಎತ್ತಿನ ಭುಜ ಶಿಖರಕ್ಕೆ ಜನರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಈ ಸ್ಥಳದ ಸೌಂದರ್ಯ ಬಣ್ಣಿಸಲು ಪದಗಳೇ ಸಾಲವು. ದಟ್ಟವಾದ ಕಾಡು, ಮಂಜಿನಿಂದ ಆವೃತವಾದ ಶಿಖರಗಳು, ಎತ್ತ ನೋಡಿದರೂ ಹಚ್ಚ ಹಸಿರಿನ ವಾತಾವರಣ, ತಂಪಾದ ಗಾಳಿಯಿಂದ ಕೂಡಿದೆ. ಜನರು ಶಿಖರಕ್ಕೆ ತಲುಪಿ ಪಶ್ಚಿಮ ಘಟ್ಟಗಳ ದೈತ್ಯ ಗುಡ್ಡಗಳು, ನದಿಗಳು, ಶಿವಗಿರಿ ಬೆಟ್ಟಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಇಲ್ಲಿ ಚಾರಣ ಮಾಡುತ್ತಾ ತಲುಪುವ ಪ್ರವಾಸಿಗರು ಕೇವಲ ಶಿಖರದ ನೈಸರ್ಗಿಕ ನೋಟವನ್ನೇ ಅಲ್ಲದೆ, ಬೆಳಗಿನ ಸೂರ್ಯೋದಯ ಮತ್ತು ಸೂರ್ಯಾಸ್ತ ದೃಶ್ಯಗಳನ್ನು ನೋಡಲು ಹೆಚ್ಚು ಉತ್ಸಾಹ ತೋರಿಸುತ್ತಾರೆ. ಏಕೆಂದರೆ ಇದು ಇಲ್ಲಿ ನೋಡಲೇ ಬೇಕಾಗಿರುವ ಸುಂದರವಾದ ದೃಷ್ಯ. ಇನ್ನು ಇದು ಫೋಟೋಗ್ರಫಿಗೂ ಬಹಳ ಫೇಮಸ್ ಆಗಿದೆ. ಜನರು ಪ್ರಕೃತಿಯ ಮಡಿಲಿನಲ್ಲಿ ಕುಳಿತು ರೋಮಾಂಚಕ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು.
ಇದರ ಜೊತೆಗೆ ಶಿಖರದ ಬಳಿ ಕ್ಯಾಂಪಿಂಗ್ ಮಾಡಬಹುದು. ಆದರೆ ಕ್ಯಾಂಪಿಂಗ್ ಮಾಡಲು ಅನುಮತಿ ಪಡೆಯಬೇಕು. ಎತ್ತಿನಭುಜ ಶಿಖರಕ್ಕೆ ತಲುಪುವ ಬಗೆ ಹಾಗೂ ಭೇಟಿ ನೀಡಲು ಉತ್ತಮ ಸಮಯ, ಅಕ್ಟೋಬರ್ನಿಂದ ಫೆಬ್ರವರಿ ತಿಂಗಳು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಮಳೆ ಸುರಿಯದ ಸಮಯದಲ್ಲಿ ಭೇಟಿ ನೀಡುವುದು ಒಳ್ಳೆಯದು.