
ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಮಂಗಳವಾರ ರಾತ್ರಿ ಸಚಿವ ಶಿವರಾಜ್ ತಂಗಡಗಿ ಅವರ ಭದ್ರತಾ ವಾಹನವು ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಎ.ಎಸ್.ಐ ಗಾಯಗೊಂಡಿದ್ದಾರೆ.

j3tvkannada.in
ಸಚಿವ ಶಿವರಾಜ್ ತಂಗಡಗಿ ಅವರು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಪ್ರಯಾಣಿಸುತ್ತಿದ್ದರು. ಸಕಲಾಪುರಹಟ್ಟಿ ಗೊಲ್ಲರಹಟ್ಟಿ ಕ್ರಾಸ್ ಬಳಿ ಅವರ ಬೆಂಗಾವಲು ವಾಹನವು ಓವರ್ ಟೇಕ್ ಮಾಡಿ ಮುಂದೆ ಬಂದಾಗ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ಘಟನೆಯಲ್ಲಿ ಕೊಟ್ಟೂರು ಠಾಣೆಯ ಎ.ಎಸ್.ಐ ಹುಲಿಯಪ್ಪ ಅವರಿಗೆ ಗಾಯಗಳಾಗಿವೆ. ತಕ್ಷಣ ಅವರನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಸಚಿವರು ದಾಖಲಿಸಿದ್ದಾರೆ.
ಅದೃಷ್ಟವಶಾತ್ ಚಾಲಕ ಅಮರೇಶ್ ಗೆ ಯಾವುದೇ ತೊಂದರೆಯಾಗಿಲ್ಲ. ಕೂಡ್ಲಿಗಿ ಉಪ ವಿಭಾಗದ ಡಿ.ವೈ.ಎಸ್ಪಿ ಮಲ್ಲೇಶ್ ದೊಡ್ಡಮನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಚಿವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಗಂಗಾವತಿಯಲ್ಲಿ ಸಂಜೆವರೆಗೂ ಕೆಡಿಪಿ ಸಭೆ ನಡೆಸಿದ ಸಚಿವರು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ.
ಸಚಿವ ಶಿವರಾಜ ತಂಗಡಗಿ ಅವರು ಸರಕಾರಿ ವಾಹನದಲ್ಲಿ ಇರಲಿಲ್ಲವಾದರೂ, ಅದರ ಮುಂದೆಯೇ ಖಾಸಗಿ ವಾಹನದಲ್ಲಿ ತೆರಳುತ್ತಿದ್ದರಿಂದ ಪಾರಾಗಿದ್ದಾರೆ. ಸಚಿವರ ಸರಕಾರಿ ವಾಹನದಲ್ಲಿ ಡ್ರೈವರ್ ಮತ್ತು ಫೋಟೋಗ್ರಾಫರ್ ಮಾತ್ರ ಇದ್ದು, ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.