
ರಾಮನಗರ: ಶಾಲೆ ಅಂದರೆ ಮಕ್ಕಳ ಪಾಲಿನ ದೇವಸ್ಥಾನವಿದ್ದಂತೆ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಕೇಂದ್ರ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಅದರಲ್ಲೂ ರೇಷ್ಮೆ ನಗರಿ ರಾಮನಗರದಲ್ಲಿ ಅನುಮತಿ ಪಡೆಯದೇ ನಕಲಿ ಖಾಸಗಿ ಶಾಲೆಗಳನ್ನು ನಡೆಸಲಾಗುತ್ತಿದೆ.

j3tvkannada
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಅನಧಿಕೃತ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿವೆ. ಕೆಲವು ಶಿಕ್ಷಣ ಸಂಸ್ಥೆಗಳು ಹಣದಾಸೆಗೆ ಸಾಕಷ್ಟು ಅಕ್ರಮ ಎಸಗುತ್ತಿವೆ. ಅದಕ್ಕೆ ಸ್ವಷ್ಟ ನಿದರ್ಶನವೆಂಬಂತೆ ರಾಮನಗರದ ಜಿಯಾವುಲ್ಲಾ ಬ್ಲಾಕ್ನ ಸುಲೆಮಾನ ಹಾಗೂ ಶಬ್ರಿನ್ ತಾಜ್ ಎಂಬುವವರು ತಮ್ಮ ಮಗಳನ್ನು ತಮ್ಮ ಏರಿಯಾದಲ್ಲೇ ಇದ್ದ ನೊಬೆಲ್ ಇಂಗ್ಲಿಷ್ ಶಾಲೆಗೆ ಸೇರಿಸಿದ್ದರು. ಕೇವಲ ಐದನೇ ತರಗತಿವರೆಗೆ ಮಾತ್ರ ಅನುಮತಿಯನ್ನು ಪಡೆದಿರುವ ಶಾಲೆ ಅಕ್ರಮವಾಗಿ ಆರು ಮತ್ತು ಏಳನೇ ತರಗತಿಗಳನ್ನು ನಡೆಸುತ್ತಿರುವುದಾಗಿ ತಮ್ಮ ಮಗಳು ಆರನೇ ತರಗತಿಗೆ ಬಂದ ನಂತರ ಗೊತ್ತಾಗಿದೆ.
ಹೀಗಾಗಿ ಬೇರೆ ಶಾಲೆಗೆ ಸೇರಿಸಲು ಶಾಲೆಯ ಟಿ.ಸಿಯನ್ನು ಕೇಳಿದರೆ ಬೇರೊಂದು ಸರ್ಕಾರಿ ಉರ್ದು ಶಾಲೆಯ ಟಿಸಿ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮಗಳು ಐದನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು ಅದಕ್ಕೆ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲವೆಂದು ಶಬ್ರಿನ್ ತಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ನಗರದ ಗುಡ್ ಹೋಪ್ ಎಂಬ ಖಾಸಗಿ ಶಾಲೆ ಸರ್ಕಾರದಿಂದ ಅನುಮತಿಯನ್ನು ಪಡೆಯದೇ ಕಳೆದ ಹಲವು ವರ್ಷದಿಂದ ಶಾಲೆಯನ್ನು ನಡೆಸುತ್ತಿದೆ. ಈ ಶಾಲೆಗೆ ಸೇರಿದ ಪೋಷಕರು ತಮ್ಮ ಮಕ್ಕಳನ್ನು ಬೇರೊಂದು ಶಾಲೆಗೆ ಸೇರಿಸಲು ಆ ಶಾಲೆಯಿಂದ ಆನ್ ಲೈನ್ ಟಿ.ಸಿ ಯನ್ನು ಸಹ ಕೊಟ್ಟಿಲ್ಲ. ಹಣದಾಸೆಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರಾದ ಸಲಿಂ ಪಾಷ ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಬಿ.ಇ.ಒ ಸೋಮಲಿಂಗಯ್ಯ ಅವರನ್ನು ಕೇಳಿದರೆ, ಈಗಾಗಲೇ ನೊಬಲ್ ಶಾಲೆಯ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಹುಡ್ ಹೋಪ್ ಶಾಲೆಯನ್ನು ಮುಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ನಕಲಿ ಖಾಸಗಿ ಶಾಲೆಗಳ ಹಣದಾಹಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವಂತೆ ಆಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.