
ಬೆಂಗಳೂರು ಗ್ರಾಮಾಂತರ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣವನ್ನು ಸೂರ್ಯನಗರ ಠಾಣಾ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಸೂರ್ಯನಗರ ಠಾಣಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ? ಬೆಂಗಳೂರು ಟು ಬಿಹಾರ ಪೊಲೀಸರ ಕಾರ್ಯಾಚರಣೆಗೆ ಹೇಗಿತ್ತು ಎಂಬುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬಿಹಾರ ಮೂಲದ ಆರೋಪಿಗಳಾದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು. ಪ್ರಕರಣದ ಎ1 ಅಶಿಕ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದಾನೆ. ನಂತರ ಎಲ್ಲರೂ ಸೇರಿಕೊಂಡು ಬಾಲಕಿಯ ಶವವನ್ನು ಸೂಟಕೇಸ್ನಲ್ಲಿ ಹಾಕಿ ರೈಲ್ವೆ ಹಳಿ ಪಕ್ಕದಲ್ಲಿ ಎಸೆದು ಹೋಗಿದ್ದಾರೆ ಎಂಬುವುದನ್ನು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮೇ 21 ರಂದು ರೈಲ್ವೆ ಬ್ರಿಡ್ಜ್ ಬಳಿ ಸೂಟ್ಕೇಸ್ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸೂಟ್ಕೇಸ್ನಲ್ಲಿ 17 ರಿಂದ 18 ವರ್ಷದ ಮಹಿಳೆ ಶವ ಎಂದು ಅಂದಾಜಿಸಲಾಯ್ತು. ರೈಲಿನಿಂದ ಸೂಟ್ ಕೇಸ್ ಬಿಸಾಡಿರಬಹುದೆಂಬ ಅನುಮಾನ ಇತ್ತು. ಆಗ, ಯುವತಿಯ ಗುರುತು ಪತ್ತೆ ಆಗಿರಲಿಲ್ಲ. ಈ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದರು.