
ರಾಯಚೂರು: ಹವಾಮಾನ ಇಲಾಖೆಯ ವರದಿಯನ್ವಯ ಮೇ 24 ರಂದು ನೈಋುತ್ಯ ಮಾನ್ಸೂನ್ ಕೇರಳ ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಕುರಿತು ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೀಶ್ ಕೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

j3tvkannada.in
ಜಿಲ್ಲೆಯಲ್ಲಿ ಯಾವುದೇ ಸಂದರ್ಭದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಎದುರಾದಲ್ಲಿ ಸಮರ್ಥವಾಗಿ ಎದುರಿಸಲು ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು ಸಿದ್ಧರಿರಬೇಕು. ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗಾಪಂ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಯು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಹಾಗೂ ಭಾರಿ ಮಳೆಯಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಬೇಕು. ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳಿಯುವುದು, ಈಜಾಡುವುದು, ದನ ಅಥವಾ ಕರುಗಳನ್ನು ಮೇಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮವಹಿಸಬೇಕು.
ಸೆಲ್ಫೀ ತೆಗೆಯಬೇಡಿ
ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ, ಶಾಲೆಗಳು ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುವುದರಿಂದ ಸಾವು, ನೋವುಗಳು ಸಂಭವಿಸುವ ಸಂದರ್ಭವಿರುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳವುದು ಅಥವಾ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಾಗೃತಿ ಮೂಡಿಸುವುದು. ನದಿ ದಡದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಪಾಯವಿರುವ ನದಿ ಅಥವಾ ಹಳ್ಳಗಳಲ್ಲಿ ಈಜಾಡುವುದು ಮತ್ತು ಪೋಟೊ, ಸೆಳ್ಪಿ ತೆಗೆಯದಂತೆ ಕ್ರಮವಹಿಸುವುದು.
ಡಂಗೂರ ಮೂಲಕ ಜಾಗೃತಿ ಮೂಡಿಸಬೇಕು
ಭಾರಿ ಮಳೆ ಹಾಗೂ ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು, ಮೈಕ್ ಮೂಲಕ ಜಾಗೃತಿ ಮೂಡಿಸುವುದು. ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಪ್ರತಿ ದಿನ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಹಾಯವಾಣಿ ಕೇಂದ್ರ ತೆರೆಯಬೇಕು:
ಮಳೆ ಹಾಗೂ ಪ್ರವಾಹ ಸೇರಿ ಇತರೆ ಸಮಸ್ಯೆಗಳ ತುರ್ತು ಪರಿಹಾರಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ : 08532-226383 ಅಥವಾ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ,1077, ರಾಯಚೂರು ಮಹಾನಗರ ಪಾಲಿಕೆ: 08532-200551, ರಾಯಚೂರು ತಹಶೀಲ್ದಾರ್ ಕಚೇರಿ: 08532-200772, ಮಾನ್ವಿ ತಹಶೀಲ್ದಾರ್ ಕಚೇರಿ: 08538-220239, ಸಿಂಧನೂರು ತಹಶೀಲ್ದಾರ್ ಕಚೇರಿ: 9035640154, ಲಿಂಗಸೂಗೂರು ತಹಶೀಲ್ದಾರ್ ಕಚೇರಿ: 08537-275247, ದೇವದುರ್ಗ ತಹಶೀಲ್ದಾರ್ ಕಚೇರಿ: 08531-200117, ಸಿರವಾರ ತಹಶೀಲ್ದಾರ್ ಕಚೇರಿ: 08538-200082, ಮಸ್ಕಿ ತಹಶೀಲ್ದಾರ್ ಕಚೇರಿ: 08537-295504ಗೆ ಸಾರ್ವಜನಿಕರು ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.