
ಭಾರತ: ಬೇಸಿಗೆ ಬಂತೆಂದರೆ ಸಾಕು ಮಾವಿನ ಹಣ್ಣು ಸೀಸನ್ಗಾಗಿ ಇಡೀ ಜಗತ್ತೇ ಕಾಯುತ್ತಿರುತ್ತದೆ. ಅದರಲ್ಲಿಯೂ ಭಾರತದಲ್ಲಿ ಈ ಹಣ್ಣಿನ ರಾಜನಿಗೆ ಬೇಡಿಕೆ ಅತ್ಯಧಿಕ. ಜತೆಗೆ ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಾವನ್ನು ಉತ್ಪಾದಿಸಲಾಗುತ್ತಿದೆ. ವಿಶ್ವದಲ್ಲೇ ಅಧಿಕ ಪ್ರಮಾಣದ ಮಾವು ಉತ್ಪಾದಿಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಜಗತ್ತಿನಲ್ಲಿರುವ ಒಟ್ಟು ಮಾವಿನ ಹಣ್ಣುಗಳ ಪೈಕಿ ಅರ್ಧದಷ್ಟು ಭಾರತದಲ್ಲೇ ಕಂಡುಬರುತ್ತದೆ ಎನ್ನುವುದು ವಿಶೇಷ.

j3tvkannada
ಮಾವಿನ ಹಣ್ಣಿನ ರಫ್ತಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ವಿಶ್ವಕ್ಕೆ ಅಗತ್ಯವಾದ ಶೇ. 50 ರಷ್ಟನ್ನು ಇಲ್ಲೇ ಬೆಳೆಯಲಾಗುತ್ತದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಾವು ಬೆಳೆಯಲಾಗುತ್ತದೆ. ಅದರಲ್ಲಿಯೂ ಉತ್ತರ ಪ್ರದೇಶ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಇದರ ಸಂಖ್ಯೆ ಹೆಚ್ಚು. ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ಉತ್ಪಾದನೆಯ ಪೈಕಿ ಶೇ. 25–26ರಷ್ಟು ಉತ್ತರ ಪ್ರದೇಶದಲ್ಲಿ ಕಂಡು ಬರುತ್ತದೆ. ಪ್ರತಿ ವರ್ಷ ಅಂದಾಜು 4.5 ಮಿಲಿಯನ್ ಮೆಟ್ರಿಕ್ ಟನ್ ಮಾವು ಬೆಳೆಯಲಾಗುತ್ತದೆ. ಫಲವತ್ತಾದ ಗಂಗಾ ನದಿ ಜಲಾನಯನ ಪ್ರದೇಶ, ಅನುಕೂಲಕರ ಹವಾಮಾನ ಮತ್ತು ಪ್ರಾಚೀನ ಕೃಷಿ ಸಂಪ್ರದಾಯಗಳು ಇದಕ್ಕೆ ಕಾರಣ. ಮಲಿಹಾಬಾದ್, ಸಹರಾನ್ಪುರ ಮತ್ತು ಲಖನೌಗಳಲ್ಲಿ ಬೆಳೆಯುವ ದಸರಾಹ್ರಿ, ಲಂಗ್ರಾ, ಚೌನ್ಸಾ ಮತ್ತು ಸಫೇದಾದಂತಹ ಜನಪ್ರಿಯ ಮಾವಿನ ಪ್ರಭೇದಗಳು ವಿದೇಶಗಳಲ್ಲೂ ವ್ಯಾಪಕ ಮೆಚ್ಚುಗೆ ಪಡೆದಿವೆ.
ಮಾವನ್ನು ಸಿಹಿ ಮತ್ತು ರುಚಿ ಮಾತ್ರವಲ್ಲದೆ ಪೌಷ್ಟಿಕಾಂಶದ ಕಾರಣದಿಂದಲೂ ‘ಹಣ್ಣುಗಳ ರಾಜ’ ಎಂದು ಕರೆಯಲಾಗುತ್ತದೆ. ಇದು ವಿಟಮಿನ್ ಎ, ಸಿ ಮತ್ತು ಇ ಯಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 25 ಮಿಲಿಯನ್ ಮೆಟ್ರಿಕ್ ಟನ್ ಮಾವಿನ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿನ ವೈವಿಧ್ಯಮಯ ಹವಾಮಾನ ಮತ್ತು ಫಲವತ್ತಾದ ಮಣ್ಣು ಅಲ್ಫೋನ್ಸೊ, ಕೇಸರ್, ದಸರಾ ಸೇರಿದಂತೆ ಹಲವು ಪ್ರಭೇದಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದೆ. ಮಾವಿನ ಹಣ್ಣುಗಳು ಆಹಾರವಾಗಿ ಮಾತ್ರವಲ್ಲದೆ ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳಲ್ಲಿ ಆಳವಾಗಿ ಬೇರೂರಿದೆ.

j3tvkannada
ಮಾವು ಉತ್ಪಾದನೆಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದ್ದು, ಪ್ರತಿ ವರ್ಷ ಅಲ್ಲಿ ಸುಮಾರು 3.8 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದಿಸಲಾಗುತ್ತದೆ. ದೇಶದ ದಕ್ಷಿಣ ಭಾಗಗಳಲ್ಲಿ ಇದರ ಕೃಷಿ ಹೆಚ್ಚು. ಹೆಚ್ಚುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು ಮತ್ತು ರಫ್ತು ಪ್ರಮಾಣ ವೃದ್ಧಿಸಲು ಚೀನಾ ತನ್ನ ಮಾವಿನ ಕೃಷಿ ಪ್ರದೇಶಗಳನ್ನು ವಿಸ್ತರಿಸುತ್ತಿದೆ. ಈ ಪಟ್ಟಿಯಲ್ಲಿ ಇಂಡೋನೇಷ್ಯಾ 3ನೇ ಸ್ಥಾನದಲ್ಲಿದ್ದು, ವಾರ್ಷಿಕ ಸುಮಾರು 3.6 ಮಿಲಿಯನ್ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿದೆ. ಜಾವಾ ಮತ್ತು ಸುಮಾತ್ರಾದಂತಹ ಪ್ರದೇಶಗಳಲ್ಲಿ ಬಿಸಿ ವಾತಾವರಣವಿದ್ದು, ಮಾವಿನ ಕೃಷಿಗೆ ಇದು ಸೂಕ್ತ. ಇಂಡೋನೇಷ್ಯಾದ ಗೆಡಾಂಗ್ ಗಿಂಚು ಮಾವಿನ ಘಮ ಜಗತ್ತಿಗೇ ಹರಡಿದೆ.
ಪಾಕಿಸ್ತಾನವು 4ನೇ ಸ್ಥಾನದಲ್ಲಿದ್ದು, ವರ್ಷಕ್ಕೆ ಸುಮಾರು 2.7 ಮಿಲಿಯನ್ ಮೆಟ್ರಿಕ್ ಟನ್ ಮಾವಿನ ಹಣ್ಣು ಉತ್ಪಾದಿಸುತ್ತದೆ. ಆ ದೇಶದ ಬೆಚ್ಚಗಿನ ಹವಾಮಾನ ಮತ್ತು ಫಲವತ್ತಾದ ಮಣ್ಣು ಮಾವಿನ ಹಣ್ಣು ಬೆಳೆಯಲು ಸೂಕ್ತ. ಚೌನ್ಸಾ ಮತ್ತು ಸಿಂಧರಿಯಂತಹ ಪಾಕಿಸ್ತಾನಿ ಪ್ರಭೇದಗಳು ಸಿಹಿ ಮತ್ತು ವಿಶಿಷ್ಟ ರುಚಿಗಾಗಿ ಜಾಗತಿಕವಾಗಿ ಜನಪ್ರಿಯ. ಮೆಕ್ಸಿಕೋ ಸುಮಾರು 2.4 ಮಿಲಿಯನ್ ಮೆಟ್ರಿಕ್ ಟನ್ ಮಾವಿನ ಹಣ್ಣನ್ನು ವಾರ್ಷಿಕವಾಗಿ ಉತ್ಪಾದಿಸುವ ಮೂಲಕ 5ನೇ ಸ್ಥಾನ ಹೊಂದಿದೆ. ಅಲ್ಲಿ ಬೆಳೆಯುವ ಅಟಾಲ್ಫೊ ಮತ್ತು ಟಾಮಿ ಅಟ್ಕಿನ್ಸ್ನಂತಹ ಪ್ರಭೇದಗಳನ್ನು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಮೆಕ್ಸಿಕೋದ ಕೃಷಿ ಆರ್ಥಿಕತೆಯಲ್ಲಿ ಮಾವು ಪ್ರಮುಖ ಪಾತ್ರ ವಹಿಸುತ್ತದೆ. ಅದಾದ ಬಳಿಕದ ಸ್ಥಾನವನ್ನು ಥಾಯ್ಲೆಂಡ್, ಫಿಲಿಪ್ಪೈನ್ಸ್, ಬಾಂಗ್ಲಾದೇಶ, ನೈಜೇರಿಯಾ ಮತ್ತು ಬ್ರೆಜಿಲ್ ಹೊಂದಿದೆ. ಇಲ್ಲೆಲ್ಲ ಮಾವನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹವಾಮಾನಕ್ಕೆ ಅನುಗುಣವಾಗಿ ವಿವಿಧ ತಳಿಯನ್ನು ಉತ್ಪಾದಿಸಲಾಗುತ್ತದೆ.