
ತುಮಕೂರು: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮೈದಾನದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ನಿರ್ಮಿಸಿರುವ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡಗಳ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ನಿರ್ಮಾಣ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಕೊಠಡಿಗಳನ್ನು ಬಳಸಲು ಸಾಧ್ಯವಾಗಿಲ್ಲ. ₹3 ಕೋಟಿ ವೆಚ್ಚದಲ್ಲಿ ಎರಡು ಪ್ರತ್ಯೇಕ ಕಟ್ಟಡ ನಿರ್ಮಿಸಲಾಗಿದೆ. ಒಂದರಲ್ಲಿ 3 ಕೊಠಡಿ, ಗ್ರಂಥಾಲಯ, 2 ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಮತ್ತೊಂದು ಕಟ್ಟಡದಲ್ಲಿ 3 ಕೊಠಡಿಗಳಿವೆ. ಹಲವು ದಿನಗಳಿಂದ ಸುಸಜ್ಜಿತ ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. 2022ರ ಮೇ 20ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. 2020 ರಲ್ಲಿಯೇ ಶಂಕು ಸ್ಥಾಪನೆ ನೆರವೇರಿಸಬೇಕಿತ್ತು. ಕೋವಿಡ್ ಕಾರಣಕ್ಕೆ ಅದು ಸಾಧ್ಯವಾಗಿರಲಿಲ್ಲ.

j3tvkannada
ಎರಡು ವರ್ಷಗಳ ನಂತರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಪ್ರಾರಂಭದಲ್ಲಿ ಕೆಲಸಗಳು ನಿಧಾನಗತಿಯಲ್ಲಿ ಸಾಗಿದ್ದವು. ಇದೀಗ ಎಲ್ಲಾ ಕಾರ್ಯ ಪೂರ್ಣಗೊಂಡ ನಂತರವೂ ಕೊಠಡಿ, ಗ್ರಂಥಾಲಯದ ಬಾಗಿಲು ತೆಗೆದಿಲ್ಲ. 1958ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭವಾಗಿದ್ದು, ಪ್ರಸ್ತುತ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈಗ ಇರುವ ಸಂಖ್ಯೆಗೆ ಹಳೆಯ ಕಟ್ಟಡದಲ್ಲಿರುವ ಕೊಠಡಿಗಳು ಸಾಲುತ್ತಿಲ್ಲ. ಇದರ ಜತೆಗೆ ಮಳೆ ಬಂದರೆ ಕೆಲವು ಕೊಠಡಿಗಳು ತೊಟ್ಟಿಕ್ಕುತ್ತಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ಕಾಮಗಾರಿ ಮುಗಿದರೂ ಹೆಚ್ಚಿನ ಪ್ರಯೋಜನ ಇಲ್ಲದಂತಾಗಿದೆ. ಸಿವಿಲ್ ಎಂಜಿನಿಯರಿಂಗ್, ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಆಟೊಮೊಬೈಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಒಳಗೊಂಡಂತೆ ಆರು ಕೋರ್ಸ್ಗಳಿವೆ.
ಪ್ರಥಮ ವರ್ಷ ಪ್ರತಿ ವಿಭಾಗಕ್ಕೆ 60 ಜನರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಈಗಷ್ಟೇ ಪಿಯುಸಿ, ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜು ಪ್ರವೇಶಾತಿ ಕ್ರಿಯೆಗಳು ಪ್ರಾರಂಭವಾಗಲಿವೆ. ಹೊಸ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತುವ ಮುನ್ನ ಹೊಸ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಬೇಕು. ಇಲ್ಲದಿದ್ದರೆ ಅವರು ಕೂಡ ಪಾಠ, ಪ್ರಯೋಗಾಲಯಕ್ಕಾಗಿ ಅಲೆದಾಟ ನಡೆಸಬೇಕಾಗುತ್ತದೆ ಎಂದು ಕಾಲೇಜಿನ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.