
ಕೊಪ್ಪಳ: ಸಮೃದ್ಧ ಇತಿಹಾಸವುಳ್ಳ ತಾಲ್ಲೂಕಿನಲ್ಲಿ ಅದರ ಕುರುಹುಗಳು ನಶಿಸುತ್ತಿವೆ. ನಿರಂತರ ಇವು ಸುದ್ದಿಯಲ್ಲಿದ್ದರೂ ಅವುಗಳಿಗೆ ಪುನಶ್ಚತನ ನೀಡಿ ರಕ್ಷಿಸುವ ಕಾರ್ಯ ಆಗುತ್ತಿಲ್ಲ.

j3tvkannada
ರಾಜ ಮಹಾರಾಜರ ವೀರಾವೇಶ, ಆಡಳಿತ, ರಕ್ಷಣೆ, ತಂತ್ರಜ್ಞಾನ, ಕಲಾವಂತಿಕೆ ಎಲ್ಲದಕ್ಕೂ ಸಾಕ್ಷಿಯಾಗಿ ತಾಲ್ಲೂಕಿನಲ್ಲಿ ಕೋಟೆ ಕೊತ್ತಲ, ದೇವಸ್ಥಾನಗಳಿವೆ. ಆದರೆ, ಅವುಗಳನ್ನು ರಕ್ಷಿಸಬೇಕು. ವಿನಾಶದ ಅಂಚಿಗೆ ತಲುಪಿರುವ ಕಟ್ಟಡಗಳಿಗೆ ಪುನರ್ಜೀವ ನೀಡಬೇಕು. ನಿಧಿಗಳ್ಳರ ಕಾಟದಿಂದ ಅವುಗಳನ್ನು ರಕ್ಷಿಸಬೇಕು. ಜಿಲ್ಲೆಯನ್ನು ಅದ್ಭುತವಾದ ಪ್ರವಾಸಿ ತಾಣ, ಇತಿಹಾಸ ಅಧ್ಯಯನ ಕೇಂದ್ರವನ್ನಾಗಿ ಮಾಡಬೇಕು ಎಂಬುದು ಜನರ ಬಹುಕಾಲದ ಬೇಡಿಕೆ. ಅದರ ಮಹತ್ವದ ಅರಿವು ಸ್ಥಳೀಯರಿಗಿಲ್ಲ. ಆಡಳಿತ ಇತ್ತ ಕಣ್ಣು ಹಾಯಿಸಿಲ್ಲ ಎಂಬುದು ಕೇಳಿ ಬರುತ್ತಿರುವ ದೂರು. ಕೆಲವು ತಾಣಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಅಲ್ಲಿನ ಸ್ಥಿತಿಗತಿ ವಿವರಿಸುವ ಪುಟ್ಟ ಪ್ರಯತ್ನವಿದು.
ನವಲಿಂಗೇಶ್ವರ ದೇವಸ್ಥಾನ: ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಿಸಲಾಗಿದ್ದ ನವಲಿಂಗೇಶ್ವರ ದೇವಸ್ಥಾನ ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿದೆ.
ಪಟ್ಟಣ ಇತಿಹಾಸದಲ್ಲಿ ಕುಂತಳಪುರ ಅಥವಾ ಕುಂತಳದೇಶ ಎಂದು ಪ್ರಸಿದ್ದಿ ಪಡೆದ ಸ್ಥಳವಾಗಿದೆ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಇಲ್ಲೊಂದು ನವಲಿಂಗೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಇದು ನಗರದ ಜಗನ್ಮಾತೆ ಮಹಾಮಾಯಾ ದೇವಸ್ಥಾನದ ಪಕ್ಕದಲ್ಲಿದೆ. ಈ ದೇವಸ್ಥಾನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ 9 ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹೀಗಾಗಿ, ಇದಕ್ಕೆ ನವಲಿಂಗೇಶ್ವರ ದೇವಸ್ಥಾನ ಎಂದು ಕರೆಯಲಾಗುತ್ತದೆ.
ನವಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಕಂಡೇಶ್ವರ, ಉಜ್ಜಯನಿ ಮಹಾಕಾಲೇಶ್ವರ, ಸೌರಾಷ್ಟ್ರ ಸೋಮೇಶ್ವರ, ಭೀಮೇಶ್ವರ, ಸೇತುಬಂಧದ ರಾಮೇಶ್ವರ, ಕಾಶಿ ವಿಶ್ವೇಶ್ವರ, ನಾಸಿಕದ ತ್ರಯಂಬಕೇಶ್ವರ, ಧೂಶ್ವೇಶ್ವರ ಹಾಗೂ ಕೇದಾರನಾಥೇಶ್ವರ ಲಿಂಗಗಳನ್ನು ಈ ದೇವಸ್ಥಾನದ ಸಮುಚ್ಚಯದಲ್ಲಿ ದರ್ಶನ ಮಾಡಬಹುದಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ, ಅಮಲೇಶ್ವರ ಹಾಗೂ ವೈದ್ಯನಾಥ ಲಿಂಗಗಳನ್ನು ಹೊರತುಪಡಿಸಿ ಉಳಿದ ನವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ನವಲಿಂಗಗಳನ್ನು ಜನರು ಒಂದೇ ಕಡೆ ದರ್ಶನ ಮಾಡಿಕೊಳ್ಳಲಿ ಎಂಬ ಆಲೋಚನೆಯಿಂದ ಅಂದಿನ ಚಾಲುಕ್ಯ ದೊರೆಗಳು ಈ ದೇವಸ್ಥಾನ ನಿರ್ಮಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಸುಮಾರು ಒಂದು ಸಾವಿರ ವರ್ಷಕ್ಕೂ ಹಳೆಯ ಇತಿಹಾಸ ಹೊಂದಿರುವ ಈ ದೇವಸ್ಥಾನ ಜೀರ್ಣೋದ್ದಾರಕ್ಕಾಗಿ ಮಹಾಶಿವರಾತ್ರಿ ಸಂದರ್ಭದಲ್ಲಿ ಮಾತ್ರ ಒಂದಿಷ್ಟು ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಉಳಿದ ದೇವಸ್ಥಾನದ ಒಳಗಡೆ ಹಾಗೂ ಹೊರಗಡೆ ತಿಪ್ಪೆ ಗುಂಡಿಯಾಗಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಹೀಗಾಗಿ, ಇನ್ನಾದರೂ ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಿ, ಅಮೂಲ್ಯವಾದ ದೇವಸ್ಥಾನವನ್ನು ಪುನರುಜ್ಜಿವನಗೊಳಿಸಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಇತಿಹಾಸವಿದ್ದು ಅಲ್ಲಿನ ಅನೇಕ ದೇವಾಲಯಗಳಿಂದ ಹಾಗೂ ಮಂಟಪಗಳಿಂದ ಜಗತ್ ಪ್ರಖ್ಯಾತಿ ಪಡೆದಿದೆ. ಇಂತಹ ವಿಶೇಷತೆಯನ್ನು ಹೊಂದಿದ ಈ ಪಟ್ಟಣಕ್ಕೆ ಮೊದಲು ಕುಂತಳಪುರ ಎಂದು ಕರೆಯಲಾಗುತ್ತಿತ್ತು. ಕುಂತಳಪುರದ ಅಂದರೆ ಕುಕನೂರು ಸುತ್ತಲೂ 48 ಕೆರೆಗಳು ಇದ್ದು. ಸುತ್ತಲೂ ಅನೇಕ ದೇವಾಲಯಗಳು, ಮಂಟಪಗಳು, ಪ್ರಾಚೀನಕಾಲದ ಕಲ್ಲಿನ ಶಿಲಾಶಾಸನಗಳು ಇಲ್ಲಿ ಇಂದಿಗೂ ಪ್ರಸ್ತುತ. 7ನೇ ಶತಮಾನದಿಂದ 16ನೇ ಶತಮಾನದವರೆಗೆ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕುಲಚೂರಿಗಳು, ದೇವಗಿರಿಯ ಯಾದವರು, ಹೊಯ್ಸಳರು ಹಾಗೂ ವಿಜಯನಗರದ ರಾಜರುಗಳು ಆಳಿಹೋದ ಇತಿಹಾಸವಿದೆ.
ಕಾಲಕಾಲಕ್ಕೆ ಆ ರಾಜರ ಅಧಿಕಾರಿಗಳು ಇಲ್ಲಿ ಆಡಳಿತ ನಡೆಸುತ್ತಿದ್ದರೆಂದು ಶಾಸನ ಅಧ್ಯಯನಗಳಿಂದ ವ್ಯಕ್ತವಾಗುತ್ತದೆ. ಇಂತಹ ವೈಭವತೆಯನ್ನು ಹೊಂದಿದ ಮುಷ್ಠಿ ಕಲ್ಲೇಶ್ವರ ದೇವಸ್ಥಾನವನ್ನು ಮುಂದಿನ ಪೀಳಿಗೆಯವರು ನೋಡುವಂತೆ ರಕ್ಷಿಸಬೇಕು. ಮೂರ್ತಿಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆ ಮುಂದಾಗಬೇಕು. ದೇವಸ್ಥಾನದ ಮೇಲಿರುವ ಸಸಿಗಳು ಮರವಾಗಿ ಬೆಳೆಯುವ ಮೊದಲೇ, ಸಂಬಂಧಿಸಿದ ಇಲಾಖೆಯವರು ಇದರ ಪುನರುತ್ಥಾನದ ಕಡೆಗೆ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.
ಮಹಾದೇವ ದೇವಾಲಯ: ಇಟಗಿ ಗ್ರಾಮದ ಐತಿಹಾಸಿಕ ಪ್ರಸಿದ್ಧವಾದ ಮಹದೇವ ದೇವಾಲಯ. ಪುರಾತತ್ವ ಇಲಾಖೆ ನಾಲೈದು ವರ್ಷಗಳ ಹಿಂದೆ ದೇವಸ್ಥಾನದ ಆವರಣದಲ್ಲಿ ಕೇವಲ ಉದ್ಯಾನವನ ನಿರ್ಮಾಣ ಮಾಡಿದೆ. ಆದರೆ ದೇವಸ್ಥಾನದ ಮುಂಭಾಗ ಇರುವ ಪುಷ್ಕರಣಿ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯ ಮಾಡಬೇಕಿದೆ. ಪ್ರವಾಸಿಗರಿಗೆ ವಾಸ್ತವ್ಯ ಇರಲು ಪ್ರವಾಸಿ ತಾಣಗಳಿಲ್ಲ. ಪ್ರವಾಸಿಗರಿಗೆ ದೇವಾಲಯದ ಗುರುತಿಗೆ ಕಮಾನುಗಳಿಲ್ಲ.