
ಕೊಪ್ಪಳ: ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿಯು ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಶಾಸಕ ರೆಡ್ಡಿ, ಆಂಜನೇಯನ ದರ್ಶನ ಪಡೆದಿದ್ದಾರೆ. ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದು ತಿಳಿಸಿದ್ದಾರೆ.

j3tvkannada
ಜನಾರ್ದನ ರೆಡ್ಡಿ 575 ಮೆಟ್ಟಿಲು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಅವರಿಗೆ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದ್ದಾರೆ. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ರೆಡ್ಡಿ ಜೈಲಿನಲ್ಲಿ ಇದ್ದಾಗ ತಮ್ಮ ಪತಿ ಬೇಗ ಬಿಡುಗಡೆಯಾಗಲಿ ಎಂದು ಪತ್ನಿ ಪೂಜೆ ಸಲ್ಲಿಸಿದ್ದರು. ಪೂಜೆಗೆ ಫಲ ಸಿಕ್ಕ ಹಿನ್ನೆಲೆಯಲ್ಲಿ ಪತಿ ಜನಾರ್ದನ ರೆಡ್ಡಿ ಜೊತೆಗೂಡಿ ಅರುಣಾಲಕ್ಷ್ಮೀ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು.
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓ.ಎಂ.ಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐ.ಎ.ಎಸ್ ಅಧಿಕಾರಿ ಕೃಪಾನಂದ ಮತ್ತು ಶ್ರೀಲಕ್ಷ್ಮೀ ಇದ್ದಾರೆ.