
ಬೆಂಗಳೂರು ಗ್ರಾಮಾಂತರ: ಪಟ್ಟಣದ ಗಂಗಮ್ಮನಗುಡಿ ಬೀದಿಯ ಗಂಗಾ ಪರಮೇಶ್ವರಿ ದೇವಾಲಯದಲ್ಲಿ ಗಂಗಾ ಜಯಂತಿ ಶ್ರದ್ದಾ ಭಕ್ತಿಯಿಂದ ನಡೆಯಲ್ಲಿದೆ.

j3tvkannada
ಜಯಂತಿಯ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಂಗಾ ದೇವಿಯ ಮೆರವಣಿಗೆ ವೈಭವದಿಂದ ಜರುಗಿತು.
ಭಾನುವಾರ ಸಂಜೆ 4ರ ಸುಮಾರಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಲ್ಲಿಗೆ ಹೂವಿನ ಪಲ್ಲಕ್ಕಿಯಲ್ಲಿ ಗಂಗಾ ಮಾತೆಯ ಉತ್ಸವ ಮೂರ್ತಿಯನ್ನು ಕುಳ್ಳರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ಗೊಂಬೆ ಕುಣಿತ, ಚಂಡೆ ಸೇರಿದಂತೆ 10ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ದೇವಿಯ ಉತ್ಸವ ಮೂರ್ತಿ ಮನೆ ಮನೆಗಳ ಬಳಿ ಬಂದಾಗ ಜನ ಪೂಜೆ ಸಲ್ಲಿಸಿದರು.

j3tvkannada
ಗಂಗಮ್ಮಬೀದಿ ಗುಡಿಯಿಂದ ಹೊರಟ ಮೆರವಣಿಗೆ ಕಾಳಿಕಮಟೇಶ್ವರ ದೇವಿ ದೇವಾಲಯದ ಮೂಲಕ ಸಾಗಿ ಜಯಲಕ್ಷ್ಮಿ ಚಿತ್ರಮಂದಿರ, ದೇವರಕೊಂಡಪ್ಪ ವೃತ್ತ, ಗಾಂಧಿ ವೃತ್ತದಲ್ಲಿ ಸಾಗಿ ಗಂಗಮ್ಮನ ದೇವಾಲಯ ತಲುಪಿತು. ಗಂಗಮಾತೆಯ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಯಲ್ಲಿ ಮಹಿಳೆಯರು ಮಂಗಲಕಲಶ ಹೊತ್ತು ಸಾಗಿದರು.
ಗಂಗಮ್ಮ ದೇವಾಲಯದ ಬಳಿ ಭಕ್ತರ ದಂಡು ಹೆಚ್ಚಾಗಿತ್ತು. ದೇವಿಗೆ ಮಡಿಲಕ್ಕಿ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಲ್ಲಿಗೆ ಹೂವಿನ ಪಲ್ಲಕ್ಕಿ ಭಕ್ತರ ಗಮನ ಸೆಳೆಯಿತು. ಬೆಳಗಿನಿಂದಲೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಗಂಗಾ ಪರಮೇಶ್ವರಿ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಿತು.