ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದ್ದು ಜಗತ್ತಿನ ಎಲ್ಲಾ ಮಹಿಳಾಮಣಿಗಳಿಗೂ ಶುಭಾಷಯಗಳು. 1911ರಲ್ಲಿ ಯುರೋಪಿಯನ್ ದೇಶಗಳಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಣೆ ಮಾಡಲಾಯಿತು. ಆದರೆ, ವಿಶ್ವಸಂಸ್ಥೆಯು 1975ರಲ್ಲಿ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಎರಡು ವರ್ಷಗಳ ಬಳಿಕ 1977ರಲ್ಲಿ ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿ ಮಾರ್ಚ್ 8 ಅನ್ನು ಮಹಿಳಾ ಹಕ್ಕುಗಳು ಮತ್ತು ವಿಶ್ವ ಶಾಂತಿಗಾಗಿ ವಿಶ್ವ ಸಂಸ್ಥೆಯ ದಿನವೆಂದು ಘೋಷಿಸಲು ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸಿತು. ಹೀಗೆ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಈ ವಿಶೇಷ ಮಹಿಳಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ವಿಶೇಷ ದಿನದಂದು ಲಿಂಗ ಸಮಾನತೆ ಹಾಗೂ ಜಗತ್ತಿನಾದ್ಯಂತ ಮಹಿಳೆಯರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ, ಗೌರವಿಸಲಾಗುತ್ತದೆ. ಹೌದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆ ಮಾಡಿದ ಮಹಿಳೆಯರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತದೆ.
ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಇದ್ದೇ ಇರುತ್ತದೆ. ಹಲವು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬವನ್ನು ಸುಂದರವಾಗಿ ಮುನ್ನಡೆಸುವ ಶಕ್ತಿ ಮಹಿಳೆಗಿದೆ. ಅಂತಹ ಎಲ್ಲಾ ಸುಂದರ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು. ಮಹಿಳೆಯರ ಶಕ್ತಿ, ಅವರ ಕೊಡುಗೆ ಮತ್ತು ಹಕ್ಕುಗಳನ್ನು ಆಚರಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇನ್ನು ಇಂತಹ ಶುಭ ಸಂದರ್ಭದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿಯರಿಗೆ ಅಥವಾ ಜೀವನ ಬೆಳಗಿದ ಮಹಿಳೆಗೆ ಶುಭಾಷಯಗಳನ್ನು ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ.
ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ಮನೆ ಬೆಳಗುವ ದೀಪ. ನಾಲ್ಕು ಗೋಡೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ನಿಂತಿದ್ದಾಳೆ. ತನ್ನದೇ ಛಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾಳೆ. ಮಹಿಳಾ ದಿನಾಚರಣೆಯ ಈ ದಿನದಂದು ಮಹಿಳೆಗೆ ವಿಶೇಷ ಗೌರವ ನೀಡುತ್ತಾರೆ. ದೇವಾನು ದೇವತೆಗಳಲ್ಲೂ ಹೆಣ್ಣು ಒಂದು ಶಕ್ತಿಯಾಗಿ ಜಗತ್ತಿಗೆ ಬೆಳಕು ನೀಡಿದ ಎಷ್ಟೋ ಉದಾಹರಣೆಗಳಿವೆ. ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳಿಗೆ ಜೀವ ತುಂಬುವವಳಾಗಿದ್ದಾಳೆ ಮುದ್ದಿನ ತಂಗಿಯಾಗಿ, ಎರಡನೇ ತಾಯಿಯಂತಿರುವ ಅಕ್ಕ ಆಗಿ, ಪ್ರೀತಿಯ ಮಡದಿಯಾಗಿ, ಮಮತೆಯ ತಾಯಿಯಾಗಿ, ಅಕ್ಕರೆಯ ಅತ್ತೆಯಾಗಿ, ಜವಾಬ್ದಾರಿಯ ಸೊಸೆಯಾಗಿ, ಕರುಣಾಮಯಿ ಅಜ್ಜಿಯಾಗಿ ಎಲ್ಲಾ ಹಂತದಲ್ಲೂ ತನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸುತ್ತಾಳೆ.