
ಹಾಸನ : ಮಾರುಕಟ್ಟೆಯಲ್ಲಿ ಕೊಬ್ಬರಿ, ತೆಂಗಿನಕಾಯಿ ಮತ್ತು ಎಳ ನೀರಿಗೆ ಉತ್ತಮ ಬೆಲೆ ಸಿಗುತ್ತಿದೆ. ಈ ನಡುವೆಯೇ ತೆಂಗಿನಕಾಯಿ ಚಿಪ್ಪಿಗೂ ಶುಕ್ರದೆಸೆ ಬಂದಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

j3tvkannada
ತಿಂಗಳ ಹಿಂದೆ ಪ್ರತಿ ಟನ್ ಚಿಪ್ಪಿಗೆ 26 ಸಾವಿರ ಇದ್ದ ಬೆಲೆಯು, ಈಗ 30 ಸಾವಿರಕ್ಕೆ ಮುಟ್ಟಿದೆ. ಮಾರುಕಟ್ಟೆಯಲ್ಲಿ ಚಿಪ್ಪುಗಳ ಕೊರತೆಯಾಗಿದೆ. ಹಾಗಾಗಿ, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರ್ತಕರು ಹೇಳುತ್ತಾರೆ.
ಅಧಿಕ ಲಾಭ ಆಸೆಯಿಂದಾಗಿ ಬೆಳೆಗಾರರು ಎಳನೀರು ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉಂಡೆ ಕೊಬ್ಬರಿ ತಯಾರಿಕೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಚಿಪ್ಪಿನ ಕೊರತೆ ಎದುರಾಗಿದೆ.
ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಚಿಪ್ಪು ದೊರೆಯುತ್ತಿಲ್ಲ. ಇದರಿಂದ ಕಾರ್ಖಾನೆಗಳ ಮಾಲೀಕರು ಹಳ್ಳಿಗಳಿಗೆ ವಾಹನಗಳಲ್ಲಿ ಬಂದು ರೈತರ ಬಳಿ ಚಿಪ್ಪು ಇದೆಯಾ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

j3tvkannada
ಪ್ರಮುಖವಾಗಿ ತೆಂಗಿನಕಾಯಿ ಚಿಪ್ಪನ್ನು ಇದ್ದಿಲು ತಯಾರಿಸಲು ಬಳಸಲಾಗುತ್ತದೆ. ಅತಿಹೆಚ್ಚು ತೆಂಗು ಬೆಳೆಯುವ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲೂ ಚಿಪ್ಪಿಗೆ ಕೊರತೆ ಎದುರಾಗಿದೆ.
ಹೊರ ರಾಜ್ಯಗಳಲ್ಲಿ ಸಿಗುವ ಚಿಪ್ಪಿನಿಂದ ತಯಾರಿಸುವ ಇದ್ದಿಲಿನಲ್ಲಿ ಇಂಗಾಲದ ಪ್ರಮಾಣ ಶೇ 80ಕ್ಕಿಂತ ಕಡಿಮೆ ಇರುತ್ತದೆ. ರಾಜ್ಯದ ತೆಂಗಿನಕಾಯಿ ಚಿಪ್ಪು ಬಳಸಿ ಇದ್ದಿಲು ತಯಾರಿಸಿದರೆ ಶೇ 95ರಷ್ಟು ಪ್ರಮಾಣದ ಇಂಗಾಲದ ಅಂಶ ದೊರೆಯುತ್ತದೆ. ಹಾಗಾಗಿ, ರಾಜ್ಯದ ಚಿಪ್ಪುಗೆ ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚಳವಾಗಿದೆ.
ಸ್ಥಳೀಯ ತೆಂಗಿನ ಚಿಪ್ಪು ಬಳಸಿ ತಯಾರಿಸುವ ಇದ್ದಿಲಿಗೆ ತಮಿಳುನಾಡು, ಕೇರಳ, ಗುಜರಾತ್, ರಾಜಸ್ಥಾನದ ಕಾರ್ಖಾನೆಗಳಲ್ಲಿ ಅಧಿಕ ಬೇಡಿಕೆ ಇದೆ. ಹೀಗಾಗಿ, ಇಲ್ಲಿನ ತೆಂಗಿನಕಾಯಿ ಚಿಪ್ಪಿಗೆ ಅಧಿಕ ಬೆಲೆಯೂ ಸಿಗುತ್ತಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಮಳೆ ನಂತರ ತೆಂಗಿನ ಮರಗಳಲ್ಲಿ ಉತ್ತಮ ಫಸಲು ಬಂದು ಬೆಳೆಗಾರರು ಕೊಬ್ಬರಿ ತಯಾರಿಕೆಗೆ ಒತ್ತು ನೀಡಿದರಷ್ಟೇ ತೆಂಗಿನಕಾಯಿ ಚಿಪ್ಪಿನ ಬೆಲೆ ಕಡಿಮೆಯಾಬಹುದು. ಇಲ್ಲವಾದರೆ ಮತ್ತಷ್ಟು ದರ ಹೆಚ್ಚಳವಾಗಲಿದೆ ಎಂಬುದು ವರ್ತಕರ ಅಭಿಪ್ರಾಯ.