
ತುಮಕೂರು: ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಗ್ರಾಮದೇವತೆ ಹೊನ್ನಾದೇವಿ ಜಾತ್ರೆ ಅಂಗವಾಗಿ ಆರತಿ ಮತ್ತು ಸೋಮೋತ್ಸವ ಅದ್ದೂರಿಯಾಗಿ ಜರುಗಿತು.

j3tvkannada
ಜಾತ್ರೆಯ ಅಂಗವಾಗಿ ಹೊನ್ನಾದೇವಿಗೆ ಬಗೆ ಬಗೆಯ ಹೂ ಮತ್ತು ಹೂ ಮಾಲೆಗಳಿಂದ ಅಂಕರಿಸಲಾಗಿತ್ತು. ದೇವಾಲಯದ ಗೋಪುರ ಮತ್ತು ದೇವಾಲಯದ ಆಸು ಪಾಸು ವರ್ಣರಂಜಿತ ವಿದ್ಯುತ್ ದೀಪಗಳಿಂದ ಸಿಗರಿಸಲಾಗಿತ್ತು.
ದೇವಿ ಮಹಾತ್ಮೆ ಯಕ್ಷಗಾನ ನಾಟಕ ಪ್ರದರ್ಶನಗೊಂಡಿತು. ಕುರ್ಜಿ ಕಂಬದ ದೇವರ ಸಮ್ಮುಖದಲ್ಲಿ ಕೋಲಾಟ, ವೀರಗಾಸೆ ನೃತ್ಯ, ಕುರುಡು ಸೋಮನ ಕುಣಿತವಂತೂ ಜನರನ್ನು ನಿಬ್ಬೆರಗಾಗುವಂತೆ ಮಾಡಿತು. ಏಣಿಬೇತಾಳದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಂಗಮ ಪವಾಡ, ಹೊನ್ನಾರು, ಕರಗದ ಪೂಜೆ ಮತ್ತು ಹೊರಿಗಳ ಕಿಚ್ಚು ಹಾಯಿಸುವಿಕೆ ಜರುಗಿತು.
ಹರಕೆಯೊತ್ತ ಮಹಿಳೆಯರು, ಪುರುಷರು ಮಡೆ ಹೊತ್ತು ವಾದ್ಯ ಗೋಷ್ಠಿಯೊಂದಿಗೆ ದೇವಾಲಯದ ಬಳಿ ಸಾಗಿ ದೇವಾಲಯವನ್ನು ಮೂರು ಭಾರಿ ಪ್ರದಕ್ಷಿಣೆ ಹಾಕಿ ದೇವರಿಗೆ ಮಡೆ ಅರ್ಪಿಸಿದರು. ನಂತರ ಹೊಂಬಾಳೆ, ವೀಳ್ಯದೆಲೆ, ಕಣಗಿಲ ಹೂವುಗಳಿಂದ ಅಂಲಂಕರಿಸಿದ್ದ ಆರತಿಯನ್ನು ಹೊತ್ತ ಮಹಿಳೆಯರು ದೇವಿಗೆ ಆರತಿ ಪೂಜೆ ಸಲ್ಲಿಸಿದರು. ಭಕ್ತರು ಮತ್ತು ಭಜನೆ ಮಂಡಳಿಯಿಂದ ಭಜನೆ ನಡೆಯಿತು. ದೇವಾಲಯದ ಧರ್ಮದರ್ಶಿ ಗಂಗಾಧರ ಗೌಡ, ಗುಡಿಗೌಡರಾದ ಡಿ.ಎನ್.ಸಿದ್ದೇಗೌಡ ಮತ್ತು ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.