ಚಿತ್ರದುರ್ಗ: ಕಳ್ಳರ ಚೈಚಳಕ ಎಲ್ಲೆಲ್ಲಿ ಹೇಗೆ ಆಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಸಂದರ್ಭಗಳಲ್ಲೂ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಮೈ ಮರೆತರೂ ಬೆಲೆ ಬಾಳುವ ವಸ್ತುಗಳನ್ನು, ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ನಿನ್ನೆ ಚಿತ್ರದುರ್ಗದ ಚಳ್ಳಕೆರೆ ನಗರದಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.

ನರಹರಿ ನಗರದ ರವಿಕುಮಾರ್ ಎಂಬುವವರು ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ರವಿಕುಮಾರ್ ಅವರು ಚಳ್ಳಕೆರೆಯ ಕರ್ನಾಟಕ ಬ್ಯಾಂಕ್ನಿಂದ 1.40 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದರು. ಬಳಿಕ ಸ್ಕೂಟಿ ನಿಲ್ಲಿಸಿ ಕಿರಾಣಿ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಹಣವನ್ನು ಕದ್ದಿದ್ದಾರೆ.
ಮೂವರು ಕಳ್ಳರ ಕೈಚಳಕ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಕೂಟಿ ಕಾಣದಂತೆ ಅಡ್ಡ ನಿಂತು, ಹಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರ ಚಲನವಲನದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯವನ್ನಾಧರಿಸಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.