
ಶಿವಮೊಗ್ಗ: ಅಡಿಕೆ ಬೆಲೆ ಗಗನಮುಖಿ ಆಗಿದೆ. ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು (ಹಸಿ) ಅಡಿಕೆ ಕ್ವಿಂಟಲ್ಗೆ ಗರಿಷ್ಠ ₹92,740, ಬೆಟ್ಟೆ ಕ್ವಿಂಟಲ್ಗೆ ₹59,299 ಹಾಗೂ ರಾಶಿ ಅಡಿಕೆ ₹59,199ಕ್ಕೆ ಮಾರಾಟವಾಗಿದೆ. ಆದರೆ ಮಲೆನಾಡಿನಲ್ಲಿ ಜನವರಿ ಅಂತ್ಯಕ್ಕೆ ಅಡಿಕೆ ಕೊಯ್ದು ಮುಗಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಲಾಭಪೂರ್ಣ ಪ್ರಮಾಣದಲ್ಲಿ ಬೆಳೆಗಾರರಿಗೆ ಸಿಗುವುದಿಲ್ಲ.

j3tvkannada
ಸಣ್ಣ ಹಾಗೂ ಮಧ್ಯಮ ರೈತರಲ್ಲಿ ಬಹಳಷ್ಟು ಮಂದಿ ಈಗಾಗಲೇ ಅಡಿಕೆ ಮಾರಾಟ ಮಾಡಿದ್ದಾರೆ. ಕೆಲವರು ಮಾತ್ರ ಸಂಗ್ರಹಿಸಿಟ್ಟಿದ್ದಾರೆ. ಕಳೆದ ಹಂಗಾಮಿನಲ್ಲಿ ಅಡಿಕೆ ಖರೀದಿಸಿ ಸಂಗ್ರಹಿಸಿ ಇಟ್ಟುಕೊಂಡಿರುವ ವ್ಯಾಪಾರಸ್ಥರು ಬೆಲೆ ಏರಿಕೆಯ ಲಾಭ ಪಡೆಯುತ್ತಿದ್ದಾರೆ. ಶಿವಮೊಗ್ಗ ಎಪಿಎಂಸಿಗೆ 50 ಕ್ವಿಂಟಲ್ ಸರಕು ಅಡಿಕೆ, 2,722 ಕ್ವಿಂಟಲ್ ರಾಶಿ ಅಡಿಕೆ, 687 ಕ್ವಿಂಟಲ್ ಗೊರಬಲು ಹಾಗೂ 151 ಕ್ವಿಂಟಲ್ ಬೆಟ್ಟೆ ಅಡಿಕೆ ಆವಕವಾಗಿದೆ.
ಮಲೆನಾಡು ಭಾಗದಲ್ಲಿ ಸರಕು, ಬೆಟ್ಟೆ ಅಡಿಕೆ ಜಾಸ್ತಿ. ಈ ಬಾರಿ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಯ ಇಳುವರಿ ಕಡಿಮೆ ಆಗಿದೆ. ಕಳೆದ ವರ್ಷ ಮ್ಯಾಮ್ಮೋಸ್ನಿಂದ 3.03 ಲಕ್ಷ ಕ್ವಿಂಟಲ್ ಅಡಿಕೆ ಖರೀದಿಸಿದ್ದೆವು. ಈ ಬಾರಿ ಅಡಿಕೆ ಆವಕದ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ 45,000 ಕ್ವಿಂಟಲ್ನಷ್ಟು ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಅವಕ ಆಗದಿರುವುದೇ ಬೆಲೆ ಏರಿಕೆಗೆ ಕಾರಣ ಎಂದು ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮ್ಯಾಮೋಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವಾ ಹೇಳುತ್ತಾರೆ. ಮ್ಯಾಮೋಸ್ ಸಂಸ್ಥೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ, ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳ ವ್ಯಾಪ್ತಿಯ ಬೆಳೆಗಾರರನ್ನು ಒಳಗೊಂಡಿದೆ.