
ಉಡುಪಿ : ಉಡುಪಿಯ ಯತಿಯೊಬ್ಬರು ತುಳು ಲಿಪಿಯಲ್ಲಿ ರಚಿಸಿದ ಸರ್ವಮೂಲ ಗ್ರಂಥಕ್ಕೆ ಪಡುಬಿದ್ರಿ ಸಮೀಪದ ಪಲಿಮಾರು ಮೂಲಮಠದಲ್ಲಿ ನಿತ್ಯ ಪೂಜೆ ನೆರವೇರುತ್ತಿದೆ. ಪಲಿಮಾರು ಮಠದ ಮೂಲ ಯತಿ ಶ್ರೀ ಹೃಷಿಕೇಶತೀರ್ಥರು ರಚಿತ ಸರ್ವಮೂಲ ಗ್ರಂಥ ಈಗ ಸ್ಕ್ಯಾನ್ ಮಾಡಿದ ಸ್ವರ್ಣ ಲೇಪಿತ ಚಿಪ್ ಡಿಸ್ಕ್ ರೂಪದಲ್ಲಿದ್ದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಪತ್ನಿ ಶಿವಶ್ರೀ ಸ್ಕಂದ ಜತೆಗೂಡಿ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ಇತ್ತೀಚೆಗೆ ನೀಡಿದ ಹಿನ್ನೆಲೆಯಲ್ಲಿ ಸರ್ವಮೂಲ ಗ್ರಂಥ ಸಹಿತ ತುಳುಲಿಪಿ, ಉಡುಪಿಯ ಅಷ್ಟಮಠಗಳಲ್ಲಿರುವ ಅಮೂಲ್ಯ ತಾಳೆಗರಿಗಳು, ಕಾಗದ ಹಸ್ತಪ್ರತಿಗಳು ಮುನ್ನೆಲೆಗೆ ಬಂದಿವೆ. ದ್ವೈತ ಮತ ಸ್ಥಾಪಕ ಶ್ರೀಮಧ್ವಾಚಾರ್ಯರ ನೇರ ಶಿಷ್ಯ, ಪಲಿಮಾರು ಮಠದ ಮೂಲ ಯತಿಯಾದ ಶ್ರೀ ಹೃಷಿಕೇಶತೀರ್ಥರೇ ಸರ್ವಮೂಲ ಗ್ರಂಥ ಕರ್ತೃವಾಗಿದ್ದು 282 ತಾಳೆಗರಿಯಲ್ಲಿ 564 ಪುಟಗಳಿವೆ.

ಇತಿಹಾಸ, ಪುರಾಣ, ವೇದ, ವೇದಾಂತ, ನ್ಯಾಯಾದಿಶಾಸ್ತ್ರ, ಗೀತೆ ಎಲ್ಲದಕ್ಕೂ ಮಧ್ವರು ವ್ಯಾಖ್ಯಾನ ಮಾಡಿದ್ದಾರೆ. ಶಬ್ದಾರ್ಥ ಮಾತ್ರವಲ್ಲ ವೇದದ ಸ್ವರಗಳಿಗೂ ಅರ್ಥ ಬರೆದಿದ್ದಾರೆ. ಜನರ ಕಣ್ಣಿಗೆ ಕಾಣುವಂತೆ ಇಲ್ಲದಿದ್ದರೂ ಗ್ರಂಥ ರೂಪದಲ್ಲಿಇರುತ್ತೇನೆಂದು ಮಧ್ವರೇ ಹೇಳಿದ್ದರು. ಹೀಗಾಗಿ ಬೆಳ್ಳಿ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಸರ್ವಮೂಲ ಗ್ರಂಥಕ್ಕೆ ಮಧ್ವರ ಪ್ರತೀಕವಾಗಿ ಪೂಜೆ ಸಲ್ಲಿಸಲಾಗುತ್ತಿದೆ. ಪಲಿಮಾರು ಮಠದಲ್ಲಿ ತುಳುಲಿಪಿಯಲ್ಲಿ ರಚಿತ 280 ತಾಳೆಗರಿಗಳಿದ್ದು (500ರಿಂದ 750ವರ್ಷ ಹಳೆಯದು) 50ಕ್ಕೂ ಅಧಿಕ ಪುಸ್ತಕಗಳನ್ನು ಪಲಿಮಾರು ಮಠ ಅಧೀನದ ತತ್ವ ಸಂಶೋಧನಾ ಸಂಸತ್ತಿನಿಂದ ಬಿಡುಗಡೆ ಮಾಡಲಾಗಿದೆ. ನೂರಾರು ಕಾಗದ ಹಸ್ತ ಪ್ರತಿಗಳು 150 ವರ್ಷಗಳ ಇತಿಹಾಸ ಹೊಂದಿದ್ದು ನ್ಯಾಯಶಾಸ್ತ್ರ, ವೇದಾಂತ, ತಂತ್ರ ವಿಷಯವನ್ನು ಒಳಗೊಂಡಿದೆ. ಅಷ್ಟಮಠಗಳಲ್ಲಿರುವ ಅಮೂಲ್ಯ ತುಳುಲಿಪಿಯ ತಾಳೆಗರಿಗಳು, ಕಾಗದ ಹಸ್ತಪ್ರತಿಗಳ ಅಧ್ಯಯನ ಪ್ರಗತಿಯಲ್ಲಿದೆ. ತುಳು ಲಿಪಿಯ ಮಹಾಭಾರತ ಗ್ರಂಥ ತಿರುವನಂತಪುರದ ರಾಜರ ಅರಮನೆಯ ಗ್ರಂಥಾಲಯದಲ್ಲಿದೆ. ಮಹಾಭಾರತದ ಮೂಲ ಪ್ರತಿ ಒಂದು ಲಕ್ಷ ಶ್ಲೋಕ ಸಹಿತವಾಗಿ ಅಷ್ಟಮಠಗಳಲ್ಲಿ ದೊರೆತಿದ್ದು 13 ವರ್ಷಗಳ ಕಾಲ, 80 ವಿದ್ವಾಂಸರು ಸಂಶೋಧನೆ, ಅಧ್ಯಯನ ನಡೆಸಿದ್ದರು.

ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಸಂದರ್ಭ ಸಂಪುಟಗಳು ಪ್ರಕಟವಾಗಿವೆ. ಹರಿವಂಶದ 394 ಅಧ್ಯಾಯವನ್ನು 5ವರ್ಷ 12 ವಿದ್ವಾಂಸರು ಸಂಶೋಧನೆ, ಅಧ್ಯಯನ ಮಾಡಿದ್ದು ಬಳಿಕ ಗ್ರಂಥ ಹೊರತಲಾಗಿದೆ. ಗ್ರಾಂಥಿಕ ತುಳುಲಿಪಿಗೂ ಈಗ ಅಕಾಡೆಮಿ, ವಿವಿ ಮೂಲಕ ಕಲಿಸುವ ತುಳು ಲಿಪಿಗೂ ಶೇ.35ರಷ್ಟು ವ್ಯತ್ಯಾಸವಿದೆ. ತಾಳೆಗರಿಗಳ ಅಮೂಲ್ಯ ಸಾಹಿತ್ಯವನ್ನು ಉಳಿಸಬೇಕು. ಅಧ್ಯಯನ ಇನ್ನಷ್ಟು ಆಗಬೇಕು. 18 ಪುರಾಣಗಳ ಮೂಲಪಾಠವುಳ್ಳ ತಾಡಪತ್ರದ ಶೋಧ, ಸಂಗ್ರಹ, ಅಧ್ಯಯನ, ಪ್ರಕಟಣೆಯ 4 ಕೋಟಿ ರೂ. ಯೋಜನೆಯನ್ನು ಸಂಸತ್ ಹೊಂದಿದೆ ಎಂದು ಡಾ.ವಂಶಿಕೃಷ್ಣ ಆಚಾರ್ಯ ಪುರೋಹಿತ್, ನಿರ್ದೇಶಕ, ತತ್ವ ಸಂಶೋಧನ ಸಂಸತ್, ರಥಬೀದಿ, ಉಡುಪಿ ಇವರು ಹೇಳಿದ್ದಾರೆ.