
ಗದಗ: ಬೇಸಿಗೆಯಲ್ಲಿ ಕೆಲಸವಿಲ್ಲದೆ ಕೂಲಿಕಾರರು ಗುಳೆ ಹೋಗುವುದನ್ನು ತಪ್ಪಿಸಲು ಏ.1ರಿಂದ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸಲಾಗುತ್ತಿದೆ. ಕೂಲಿಕಾರರು, ಕಾಯಕ ಬಂಧುಗಳು ಉದ್ಯೋಗ ಚೀಟಿ ಸರಿಪಡಿಸಿ ಸಕಾಲಕ್ಕೆ ಕೂಲಿ ಹಣ ಪಾವತಿಸಲು ಸಹಕರಿಸಬೇಕು’ ಎಂದು ಜಿಲ್ಲಾ ಐಇಸಿ ಸಂಯೋಜಕ ವಿ.ಎಸ್.ಸಜ್ಜನ್ ಹೇಳಿದರು.

ಸಮೀಪದ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಲು ಕಾಯಕ ಬಂಧುಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 2025-26ನೇ ಸಾಲಿನ ನರೇಗಾ ಯೋಜನೆಯಲ್ಲಿ ಏ.1 ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತಿದೆ. ಕೂಲಿಕಾರರಿಗೆ ದಿನಕ್ಕೆ 349 ಗರಿಷ್ಟ ಕೂಲಿ ಪಾವತಿಸಲಾಗುತ್ತದೆ. ಕಾಯಕ ಬಂಧುಗಳು ಉದ್ಯೋಗ ಚೀಟಿಗಳನ್ನು ಪರಿಶೀಲಿಸಿ ನಮೂನೆ 6 ತುಂಬಿಕೊಡಬೇಕು. ಅಲ್ಲದೆ ಎನ್ಎಂಎಂಎಸ್ ಹಾಜರಿಯನ್ನು ಕಡ್ಡಾಯಗೊಳಿಸುವ ಜೊತೆಗೆ ಶೇ.50 ರಷ್ಟು ಮಹಿಳೆಯರಿಗೆ ಎನ್ಎಂಆರ್ ನೀಡಿ ಕೆಲಸಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.