
ಭಾರತದ ಅನುಭವಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 17ನೇ ವಯಸ್ಸಲ್ಲೇ ಸಚಿನ್ ತೆಂಡೂಲ್ಕರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪ್ರಸಿದ್ದಿಗೆ ಬಂದಿದ್ದ ಅವರು ತಮ್ಮ ಎರಡು ದಶಕಗಳ ಸುದೀರ್ಘ ಕ್ರಿಕೆಟ್ ಜೀವನದ ಬಳಿಕ ಇದೀಗ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ 36 ರ ಹರೆಯದ ಕ್ರಿಕೆಟರ್, ಎರಡು ದಶಕಗಳಿಗೂ ಹೆಚ್ಚು ಕಾಲ ಆಡಿದ ನಂತರ, ಈ ಸುಂದರ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

j3tvkannada
ನಾನು ಕ್ರಿಕೆಟ್ನಿಂದ ದೂರ ಸರಿಯುತ್ತಿದ್ದರೂ, ಕ್ರಿಕೆಟ್ ನನ್ನಲ್ಲೇ ಜೀವಂತವಾಗಿರುತ್ತದೆ. ಈ ಸುಂದರ ಆಟದ ಸ್ಫೂರ್ತಿ ಮತ್ತು ಪಾಠಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೊಸ ಪ್ರಯಾಣವನ್ನು ಪ್ರಾರಂಭಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗಾಗಿ ಅವರು ಕಾಮೆಂಟರಿ, ಕೋಚಿಂಗ್, ಅಂಪೈರಿಂಗ್ ಅಥವಾ ಇನ್ನಾವುದಾದರೂ ಕ್ರಿಕೆಟ್ ಸಂಬಂಧಿ ವೃತ್ತಿಯಲ್ಲೇ ಮುಂದುವರಿಯಬಹುದು ಎಂದು ಊಹಿಸಲಾಗಿದೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ.
ಭಾರತವನ್ನು ಪ್ರತಿನಿಧಿಸುವುದರಿಂದ ಹಿಡಿದು 2007ರ ಟಿ 20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿರುವುದು ನನ್ನ ಅದೃಷ್ಟ. ಈ ಎಲ್ಲಾ ನೆನಪುಗಳು ನನ್ನ ಹೃದಯದಲ್ಲಿ ಸದಾ ಹಚ್ಚ ಹಸಿರಾಗಿರುತ್ತವೆ ಎಂದು ಚಾವ್ಲಾ ಹೇಳಿದ್ದಾರೆ. ತಮ್ಮ ಕೋಚ್ಗಳು, ತಂಡಗಳು ಮತ್ತು ಐ.ಪಿ.ಎಲ್ ಫ್ರಾಂಚೈಸಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಐ.ಪಿ.ಎಲ್ ನಲ್ಲಿ ಆಡಿದ ಸಮಯವನ್ನು ತಮ್ಮ ವೃತ್ತಿ ಜೀವನದ “ವಿಶೇಷ ಅಧ್ಯಾಯ” ಎಂದು ಬಣ್ಣಿಸಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟ ಐ.ಪಿ.ಎಲ್ ಫ್ರಾಂಚೈಸಿಗಳಾದ ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ಗೆ ನಾನು ಆಭಾರಿಯಾಗಿದ್ದೇನೆ.
ಐ.ಪಿ.ಎಲ್ ನನ್ನ ವೃತ್ತಿ ಜೀವನದ ಒಂದು ವಿಶೇಷ ಅಧ್ಯಾಯ. ನಾನು ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ನನ್ನ ಕೋಚ್ಗಳಾದ ಕೆ.ಕೆ. ಗೌತಮ್ ಮತ್ತು ದಿವಂಗತ ಪಂಕಜ್ ಸರಸ್ವತ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಅವರು ನನ್ನನ್ನು ಉತ್ತಮ ಕ್ರಿಕೆಟಿಗನನ್ನಾಗಿ ರೂಪಿಸಿದರು ಎಂದು ನೆನಪಿಸಿಕೊಂಡಿದ್ದಾರೆ. ನನ್ನ ತಂದೆಗೆ ವಿಶೇಷ ಧನ್ಯವಾದಗಳು. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರಿಂದ ನಾನು ಈ ಹಾದಿಯಲ್ಲಿ ನಡೆಯಲು ಸಾಧ್ಯವಾಯಿತು. ಅವರು ಇಲ್ಲದೆ, ಈ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

j3tvkannada
ಪಿಯೂಷ್ ಚಾವ್ಲಾ ಅವರು ತಮ್ಮ 15ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಭಾರತದ ಅಂಡರ್ 19 ಮತ್ತು ಉತ್ತರ ಪ್ರದೇಶ ಅಂಡರ್ 22 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2005-2006ರ ಚಾಲೆಂಜರ್ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಗೂಗ್ಲಿಯಿಂದ ಬೌಲ್ಡ್ ಮಾಡಿದಾಗ ಅವರು ಬೆಳಕಿಗೆ ಬಂದರು. ಆಗಿನ್ನೂ ಅವರಿಗೆ 17 ವರ್ಷ ವಯಸ್ಸಷ್ಟೇ. 17ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ದೇಶೀಯ ಕ್ರಿಕೆಟ್ನಲ್ಲಿ ಚಾವ್ಲಾ 1000 ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ.
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಚಾವ್ಲಾ ಗೂಗ್ಲಿ ಮತ್ತು ವೇಗದ ಎಸೆತಗಳ ಮೂಲಕ ಗಮನ ಸೆಳೆದರು. ಅವರು ಭಾರತದ ಪರವಾಗಿ ಮೂರು ಟೆಸ್ಟ್, 25 ODI ಮತ್ತು ಏಳು T20 ಪಂದ್ಯಗಳನ್ನು ಆಡಿದ್ದಾರೆ. ODI ಕ್ರಿಕೆಟ್ನಲ್ಲಿ 4/23 ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇನ್ನು ಉತ್ತರ ಪ್ರದೇಶ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ವಿವಿಧ ಐ.ಪಿ.ಎಲ್ ತಂಡಗಳಿಗೆ ಚಾವ್ಲಾ ಆಡಿದ್ದಾರೆ. ಅವರು 446 ಪ್ರಥಮ ದರ್ಜೆ ವಿಕೆಟ್ಗಳು ಮತ್ತು 319 T20 ವಿಕೆಟ್ಗಳನ್ನು ಪಡೆದಿದ್ದಾರೆ. 2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐ.ಪಿ.ಎ.ಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ಗಳಲ್ಲಿ ಚಾವ್ಲಾ ಕೂಡ ಒಬ್ಬರು. ಒತ್ತಡದ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದ ಚಾವ್ಲಾ, ಹಲವು ಫ್ರಾಂಚೈಸಿಗಳಿಗೆ ಪ್ರಶಸ್ತಿ ಗೆಲ್ಲಲು ನೆರವಾಗಿದ್ದಾರೆ.