
ರಾಯಚೂರು: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ್, ಕಲ್ಲು ಎಸೆದು ಬಸ್ಸಿನ ಮುಂಭಾಗದ ಗಾಜು ಒಡೆದಿದ್ದಾರೆ.

j3tvkannada
ಪಟ್ಟಣದಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ದೇವದುರ್ಗದಿಂದ ರಾಯಚೂರಿಗೆ ಹೊರಟಿತ್ತು. ಕರ್ತವ್ಯ ಮುಗಿಸಿಕೊಂಡು ರಾಯಚೂರಿಗೆ ಹೊರಟಿದ್ದ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ ಬಸ್ಸಿನ ಸೀಟ್ ಒಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಚಾಲಕ ಕಂ ನಿರ್ವಾಹಕ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶಬಾಬು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.ಆದರೆ, ಪ್ರಯಾಣಿಕರ ಮೇಲೆಯೇ ರೇಗಾಡಿದ ಹೆಡ್ ಕಾನ್ಸ್ಟೇಬಲ್ ಬಸ್ ಗೆ ಕಲ್ಲು ಎಸೆದಿದ್ದಾರೆ. ಈ ಘಟನೆಯನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಗಾಜು ಒಡೆದ ಬೆನ್ನಲ್ಲೇ ಚಾಲಕ ಸುರೇಶಬಾಬು ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಹೆಡ್ ಕಾನ್ಸ್ಟೇಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುರೇಶಬಾಬು ಹಾಗೂ ಪ್ರಯಾಣಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ ಜೀವ ಬೆದರಿಕೆ ಹಾಕಿದ್ದಾರೆ. ಹೆಡ್ ಕಾನ್ಸ್ಟೇಬಲ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಪೊಲೀಸರು ಸಂಧಾನಕ್ಕೂ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.