
ಕರ್ನಾಟಕ: ಆರ್.ಸಿ.ಬಿ ತಂಡ ಚೊಚ್ಚಲ ಐ.ಪಿ.ಎಲ್ ಟ್ರೋಫಿ ಎತ್ತಿ ಹಿಡಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಹಲವೆಡೆ ಪಟಾಕಿಗಳನ್ನು ಸಿಡಿಸಿ ಜನ ಸಂಭ್ರಮಿಸಿದರೆ, ಇನ್ನು ಕೆಲವೆಡೆ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ, ಬೆಂಗಳೂರಿನ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ದುಷ್ಕರ್ಮಿಗಳ ಗುಂಪು ಕ್ರೌರ್ಯ ಮೆರೆದಿದೆ. ಸಂಭ್ರಮಾಚರಣೆ ವೇಳೆ ಯುವಕನಿಗೆ ಚಾಕು ಇರಿದು ಪರಾರಿಯಾಗಿದೆ.

j3tvkannada
ಸಂಭ್ರಮಾಚರಣೆ ಮಾಡುತ್ತಾ ದುಷ್ಕರ್ಮಿಗಳು ಬಾರ್ಗೆ ತೆರಳುತ್ತಿದ್ದರು. ಇದೇ ವೇಳೆ, ಯುವಕನಿಗೆ ಚಾಕುವಿನಿಂದ ಇರಿದಿದ್ದಾರೆ. ಸ್ಥಳದಲ್ಲಿದ್ದವರ ಪ್ರತಿರೋಧದ ಬಳಿಕ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕೂದಲೆಳೆ ಅಂತರದಲ್ಲಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾನಂಗಳದಲ್ಲಿ ಪಟಾಕಿಯಿಂದ ಬೆಳಕಿನ ಚಿತ್ತಾರ, ಮಧ್ಯರಾತ್ರಿ ಆದರೂ ರಸ್ತೆಗಳ ತುಂಬೆಲ್ಲ ಜನ ಸಾಗರ, ಬೀದಿ ಬೀದಿಯಲ್ಲೂ ಆರ್.ಸಿ.ಬಿ ಆರ್.ಸಿ.ಬಿ ಎಂದು ಜಯಘೋಷ ಕೇಳಿ ಬಂತು. ರಾತ್ರಿ ನಗರದಾದ್ಯಂತ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದರು.
ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆನೇಕಲ್, ಮಾರತ್ತಹಳ್ಳಿ ಸೇರಿದಂತೆ ಹಲವು ಏರಿಯಾಗಳಲ್ಲಿ ಆರ್.ಸಿ.ಬಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗೆದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು.

j3tvkannada
ವಿಜಯನಗರದ: ಬಿ.ಜಿ.ಎಸ್ ಮೈದಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕನ್ನಡದ ಹಾಡುಗಳಿಗೆ ಹುಚ್ಚೆದ್ದು ಸ್ಟೆಪ್ಸ್ ಹಾಕಿದರು. ಆರ್.ಸಿ.ಬಿ ಜಯಘೋಷವನ್ನು ಕೂಗಿದರು. ಎಲೆಕ್ಟ್ರಾನಿಕ್ ಸಿಟಿ, ಚಾಮರಾಜಪೇಟೆಯಲ್ಲೂ ಆರ್.ಸಿ.ಬಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಮಧ್ಯರಾತ್ರಿ ಆದರೂ ಅಭಿಮಾನಿಗಳ ಸಾಗರವೇ ರಸ್ತೆಗಳಲ್ಲಿ ತುಂಬಿ ಹೋಗಿತ್ತು. ಓರಾಯನ್ ಮಾಲ್ ಆವರಣದಲ್ಲಿ ಎಲ್.ಇ.ಡಿ ಸ್ಕ್ರೀನ್ನಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯ ಗೆಲ್ಲುತ್ತಿದ್ದಂತೆ ಆರ್.ಸಿ.ಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಶಿವಮೊಗ್ಗ: ನಿನ್ನೆ ರಾತ್ರಿಯಿಂದ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿದ್ದು, ಸಂಭ್ರಮಾಚರಣೆಯ ವೇಳೆ 2 ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದಲ್ಲಿ ಆರ್.ಸಿ.ಬಿ ಗೆದ್ದ ಖುಷಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಎಲ್ಲೆಡೆ ಪಟಾಕಿ ಸಿಡಿಸಿ, ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಸೆಲೆಬ್ರೇಶನ್ ವೇಳೆ ಆರ್.ಸಿ.ಬಿ ಅಭಿಮಾನಿಯೊಬ್ಬ ಸಾವನಪ್ಪಿದ್ದಾನೆ. ಬೈಕ್ನಲ್ಲಿ ಸೆಲೆಬ್ರೇಶನ್ ಮಾಡುವ ವೇಳೆ ಅಪಘಾತ ಸಂಭವಿಸಿದೆ. 2 ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ ಯುವಕನೊಬ್ಬ ಸಾವನಪ್ಪಿದ್ದಾನೆ. ಅಪಘಾತದಲ್ಲಿ ಅಭಿ ಎನ್ನುವ ಯುವಕ ದುರ್ಮರಣ ಹೊಂದಿದ್ದಾನೆ. ಘಟನೆ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.