

ದಕ್ಷಿಣ ಕನ್ನಡ: ವಿಶ್ವದ ಅತ್ಯಂತ ದುಬಾರಿ ಮಾವು ಎನ್ನುವ ಖ್ಯಾತಿಗೆ ಹೆಸರಾದ ಮಿಯಾಜಕಿಯನ್ನು(Miyazaki) ಇಂದು ದೇಶದ ಹಲವು ಕಡೆಗಳಲ್ಲಿ ಬೆಳೆಯಲಾಗುತ್ತದೆ. ಜಪಾನ್ ಮೂಲದ ಈ ಹಣ್ಣಿನ ವಿಶಿಷ್ಟ ಸ್ವಾದ ಮತ್ತು ಬಣ್ಣದ ಹಿನ್ನಲೆಯಲ್ಲಿ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಜೊತೆಗೆ ದುಬಾರಿ ಹಣವೂ ಇದೆ. ಈ ಮಾವನ್ನು ಕರ್ನಾಟಕದ ಕೆಲವು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಈ ಹಣ್ಣಿನ ಸಸಿಗಳು ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಪರಿಚಯಿಸಲ್ಪಟ್ಟಿದೆ. ಬಂಟ್ವಾಳ ತಾಲೂಕಿನ ಅಳಕೆಮಜಲಿನಲ್ಲಿರುವ ಜಾಕ್ ಅನಿಲ್ ಅವರ ನಿನ್ನಿಕಲ್ಲು ನರ್ಸರಿಯಲ್ಲಿ ಈ ಸಸಿಗಳನ್ನು ಪ್ರಾಯೋಗಿಕವಾಗಿ ಇಡಲಾಗಿದೆ. ಈ ಮಾವಿನ ಸಸಿಗೆ 1ರಿಂದ 2 ಸಾವಿರ ರೂಪಾಯಿವರೆಗೂ ಬೆಲೆ ನಿಗದಿಯಾಗಿದೆ. ಅತ್ಯಂತ ಹೆಚ್ಚು ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಈ ಹಣ್ಣಿನ ಗಿಡಗಳು ತಮ್ಮ ನೈಜ ರುಚಿಯನ್ನು ನೀಡುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ ವಾತಾವರಣಕ್ಕೆ ಈ ಹಣ್ಣು ಹೆಚ್ಚು ಹೊಂದಿಕೊಳ್ಳದ ಸ್ಥಿತಿಯಲ್ಲಿದೆ.