
ಮಡಿಕೇರಿ: ಜಿಲ್ಲೆಯಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಮಡಿಕೇರಿ ನಗರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಮಳೆ ಮುಂದುವರಿದಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಣೆಯಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಮಳೆಯಾಗಿದ್ದು, ಹಾರಂಗಿ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೇ ತಿಂಗಳಿನಲ್ಲಿಯೇ ಮುಂಗಾರು ಪ್ರವೇಶವಾದರೂ ಆರಂಭದ ಒಂದು ವಾರ ಕಳೆದಂತೆ ಮಳೆ ಕಡಿಮೆಯಾಗಿತ್ತು. ಜಿಲ್ಲೆಯಾದ್ಯಂತ ಜೂನ್ ಮೊದಲ ವಾರ ಬಿಸಿಲಿನ ವಾತಾವರಣದೊಂದಿಗೆ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿತ್ತು. ಈಗ ಮತ್ತೆ ಮುಂಗಾರು ಚುರುಕಾಗಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ.

ಜೂ.12 ರ ಬೆಳಗ್ಗೆ 8.30 ರಿಂದ ಜೂ.16 ರ ಬೆಳಗ್ಗೆ 8.30 ರ ವರೆಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿದೆ. ಬುಧವಾರ ಮಧ್ಯಾಹ್ನದಿಂದಲೇ ಅಲ್ಲಲ್ಲಿ ಮಳೆ ದಟ್ಟ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಭಾರಿ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಮಳೆ ವಿವರ
ಬುಧವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 2.32 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 788.36 ಮಿ.ಮೀ.ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ444.06 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ 11.33 ಮಿ.ಮೀ.ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 1171.32 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ636.41 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 0.28 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 679.42 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ362.98 ಮಿ.ಮೀ. ಮಳೆಯಾಗಿತ್ತು. ಉಳಿದಂತೆ ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ದಾಖಲಾಗಲಿಲ್ಲ.
ಹೋಬಳಿವಾರು ಮಳೆ ವಿವರ:
ಮಡಿಕೇರಿ ಕಸಬಾ – 4 ಮಿ.ಮೀ.
ಸಂಪಾಜೆ – 30.50 ಮಿ.ಮೀ.
ಭಾಗಮಂಡಲ – 10.80 ಮಿ.ಮೀ.
ಶಾಂತಳ್ಳಿ – 1.10 ಮಿ.ಮೀ.

ಹಾರಂಗಿ ನೀರಿನ ಮಟ್ಟ:
ಗರಿಷ್ಠ ಮಟ್ಟ – 2,859 ಅಡಿ
ಇಂದಿನ ಮಟ್ಟ – 2851.48 ಅಡಿ
ಒಳಹರಿವು – 1200 ಕ್ಯುಸೆಕ್
ಹೊರ ಹರಿವು – ನದಿಗೆ 2000 ಕ್ಯುಸೆಕ್
ಇನ್ನು ಮಡಿಕೇರಿ ಅಲ್ಲದೆ ರಾಜ್ಯಾದ್ಯಂತ ಜೂನ್ 17 ರವರೆಗೆ ವ್ಯಾಪಕ ಮಳೆಯಾಗಲಿದ್ದು, ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ ಕೊಡಲಾಗಿದೆ. ಜೂನ್ 12 ರಂದು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಹಾಗೂ ಒಳನಾಡಿನ ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಮತ್ತು ವಿಜಯನಗರ, ತುಮಕೂರು, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಯಚೂರು ಮತ್ತು ಧಾರವಾಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದ್ದು, ಜೂನ್ 14 ರ ವರೆಗೂ 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೊಡಲಾಗಿದೆ.