
ಬೀದರ್: ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಧಗೆ ಹೆಚ್ಚುತ್ತಿದೆ. ಇದರಿಂದ ಹೊಲದಲ್ಲಿ ಅಳಿದುಳಿದ ಬೆಳೆ ಕಮರುತ್ತಿದೆ. ಅತಿ ಬಿಸಿಲಿನಿಂದ ಬೆಳೆ ರಕ್ಷಣೆ ಜೊತೆಗೆ ಇನ್ನಿತರ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ತೊಡಕಾಗಿದೆ. ತಾಲ್ಲೂಕಿನಲ್ಲಿ ಕಳೆದ ವರ್ಷ ಕೊನೆಯ ಹಂತದಲ್ಲಿ ಮಳೆ ಕೈಕೊಟ್ಟ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ತಾಪಮಾನಕ್ಕೆ ಬಾಡಿದ ಬೆಳೆ ಕಿತ್ತು, ಕೆಲ ರೈತರು ಭೂಮಿ ಹದಗೊಳಿಸಿದ್ದಾರೆ. ಇನ್ನೂ ಕೆಲವರು ಹದಗೊಳಿಸಬೇಕಿದೆ. ಉಳಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬೇಕಿದ್ದು, ತೀವ್ರ ಗತಿಯಲ್ಲಿ ಏರುತ್ತಿರುವ ಬಿಸಿಲು ಇದಕ್ಕೆ ಆಸ್ಪದ ನೀಡುತ್ತಿಲ್ಲ.

j3tvkannada
ಕೃಷಿ ಚಟುವಟಿಕೆ ಕೈಗೊಳ್ಳಲು ಬೆಳಿಗ್ಗೆ ಹಾಗೂ ಸಂಜೆ ಹೊಲಕ್ಕೆ ಹೋಗಬೇಕು. ಬಿಸಿಲಿದ್ದಾಗ ಕೆಲಸ ಮಾಡಲು ಆಗಲ್ಲ. ನಸುಕಿನ 5ಕ್ಕೆ ಹೊಲಕ್ಕೆ ಹೋದರೆ, ಮಧ್ಯಾಹ್ನ 12 ಗಂಟೆಗೆ ಸುಸ್ತಾಗಿ, ವಿಶ್ರಾಂತಿ ಪಡೆಯಬೇಕು. ಸಂಜೆ ಹೆಚ್ಚು ಸಮಯ ಕೆಲಸ ಮಾಡಲು ಆಗಲ್ಲ. ಸುಡು ಬಿಸಿಲಲ್ಲಿ ಕೆಲಸ ಮಾಡಿದರೆ ಆರೋಗ್ಯ ಹಾಳಾಗುತ್ತದೆ ಎಂದು ಮುಚಳಂಬ ಗ್ರಾಮದ ರೈತ ಮಲ್ಲಿಕಾರ್ಜುನ್ ತಿಳಿಸಿದರು. ಈ ಬಾರಿ ನಮ್ಮಲ್ಲಿ 8 ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದು ಬಿತ್ತನೆ ಮಾಡಿದ್ದೆ. ಈ ಮೊದಲು 20 ದಿನಕ್ಕೆ ನೀರು ಹಾಯಿಸಬೇಕಿತ್ತು. ಈಗ 10 ದಿನದೊಳಗೆ ನೀರು ಹಾಯಿಸಬೇಕಿದೆ. ಬೋರ್ವೆಲ್ ನೀರು ಸಹ ಕಡಿಮೆಯಾಗಿದೆ. ಎಷ್ಟೇ ನೀರು ಹಾಯಿಸಿದರೂ ಕಬ್ಬು ಬಾಡುತ್ತಿದೆ ಹಾಗೂ ಬೆಳವಣಿಗೆ ಕುಂಟಿತವಾಗುತ್ತಿದೆ.

j3tvkannada
ನಮ್ಮ ಊರಿನಲ್ಲಿ ಹಲವರು ಬೆಳೆದ ತರಕಾರಿ ಬೆಳೆಗಳ ಪರಿಸ್ಥಿತಿಯೂ ಹೀಗೆಯೇ ಇದೆ. ಇಳುವರಿ ಕಡಿಮೆಯಾಗುವ ಆತಂಕವಿದೆ ಎಂದು ಮುಸ್ಥಾಪುರ ಗ್ರಾಮದ ಕುಪೇಂದ್ರ ಪಾಟಿಲ ಅವರು ತಿಳಿಸಿದರು. ರೈತರು ಸದ್ಯಕ್ಕಂತೂ ಹೊಲಕ್ಕೇ ಹೋಗುವಂತಿಲ್ಲ. ಅಷ್ಟು ಬಿಸಿಲಿದೆ. ಬಿರು ಬಿಸಿಲಿಗೆ ಭೂಮಿ ಬಿಸಿಯಾಗಿ, ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮೂಲಂಗಿ, ಮಂತ್ಯ, ಸಬ್ಸಿಗೆ ಬೀಜ ಹುಟ್ಟಲೇ ಇಲ್ಲ. ಎಲ್ಲವನ್ನೂ ತೆರವು ಮಾಡಿ, ಮಳೆಗಾಗಿ ಕಾಯುತ್ತಿರುವೆ. ಮುಂಗಾರಿನ ಆರಂಭದಲ್ಲಿ ಎರಡು ಮಳೆ ಚೆನ್ನಾಗಾದರೆ ಹೆಸರು ಬಿತ್ತನೆ ಮಾಡುವೆ ಎಂದು ಬೇಲೂರ ಗಾಮದ ರೈತ ಬಸವರಾಜ ಹೇಳಿದರು.
ಅತಿಯಾದ ಬಿಸಿಲಿನಿಂದ ಮಾವಿನಕಾಯಿ, ಸಪೋಟಾ ಹೂವು, ಕಾಯಿಗಳು ಉದುರುತ್ತಿವೆ. ಬೆಳೆ ಮಾರಾಟ ಸಂಬಂಧ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದೆ. ಉತ್ತಮ ಇಳುವರಿ ಸಿಗದೆ ಅವರಿಗೂ ನಷ್ಟವಾಗಿದೆ. ಲಾಭವಾಗಿದ್ದರೆ ಮುಂದಿನ ಬಾರಿ ನಮಗೂ ಹೆಚ್ಚು ದರ ನೀಡುತ್ತಿದ್ದರು ಎಂದು ಹುಲಸೂರ ಪಟ್ಟಣದ ಹೊರವಯದಲ್ಲಿರುವ ರೈತ ಬಾಬುರಾವ್ ದೇಶಮುಖ್ ಹೇಳಿದರು. ಹೊಲದಲ್ಲಿ ಶೇ 25ರಷ್ಟು ಮಾವು, ಸಪೋಟಾ ಬೆಳೆ ಇದೆ. ಬಿಸಿಲಿಗೆ ಸುಟ್ಟ ಹಣ್ಣುಗಳು ವ್ಯರ್ಥವಾಗುತ್ತಿವೆ. ಹಣ್ಣುಗಳ ಗಾತ್ರವೂ ಕಡಿಮೆಯಾಗಿದೆ. ಈಗಾಗಲೇ ಈರುಳ್ಳಿ ಬೆಳೆ ಸಂಪೂರ್ಣ ನಷ್ಟವಾಗಿದೆ. ನಂತರ ಹಾಕಿದ್ದ ಪಾಲಕ್ ಸಹ ಸೊರಗಿದೆ. ಅಗತ್ಯವಿರುವಷ್ಟು ಮಳೆಯಾದರೆ ಒಣ ಬೇಸಾಯ, ತೋಟಗಾರಿಕೆ ಬೆಳೆ ಬೆಳೆಯುವ ಜಮೀನು ತಂಪು ಹಿಡಿದಿಡುತ್ತದೆ. ಇಲ್ಲದಿದ್ದರೆ ನೀರು ಹಾಯಿಸಲು ಮಾಡಬೇಕಾದ ಖರ್ಚು ರೈತರಿಗೆ ಹೊರೆಯಾಗುತ್ತದೆ ಎಂದು ವಿವರಿಸಿದರು.