
ಹಾಸನ: ಭಾರೀ ಮಳೆಯಿಂದ ರೈಲ್ವೇ ಹಳಿ ಮೇಲೆ ಭೂ ಕುಸಿತವಾಗಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಹಳಿ ಮೇಲೆ ಗುಡ್ಡ ಕುಸಿದ ಘಟನೆ ಸಕಲೇಶಪುರ ತಾಲೂಕಿನ ಯಡೆಕುಮಾರಿ ಬಳಿ ನಡೆದಿದೆ.

j3tvkannada
ಕಿಲೋ ಮೀಟರ್ ಸಂಖ್ಯೆ 74 & 75ರ ನಡುವಿನ ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯೆ ಭಾಗದಲ್ಲಿ ಹಳಿ ಮೇಲೆ ಭೂಕುಸಿತವಾಗಿದೆ. ಭಾರೀ ದೊಡ್ಡ ಗಾತ್ರದ ಬಂಡೆ ಉರುಳಿ ಬಿದ್ದಿದ್ದು, ಹಳಿಗೆ ಹಾನಿಯಾಗಿದೆ. ಇದರಿಂದಾಗಿ ಬೆಂಗಳೂರು-ಕಣ್ಣೂರು ಘಾಟ್, ಬೆಂಗಳೂರು-ಮುರುಡೇಶ್ವರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರಕ್ಕೆ ಬಂದು ನಿಂತಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಬಾರೀ ಅನಾಹುತ ತಪ್ಪಿದಂತಾಗಿದೆ. ರೈಲು ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ರೈಲ್ವೇ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದು, ಅಧಿಕಾರಿಗಳು ಎಲ್ಲಾ ಪ್ರಯಾಣಿಕರಿಗೆ ಕಾಫಿ, ತಿಂಡಿ ವ್ಯವಸ್ಥೆ ಮಾಡಿದ್ದಾರೆ. ಕೆಲವು ಪ್ರಯಾಣಿಕರು ಬೇರೆ ವಾಹನದಲ್ಲಿ ತೆರಳುತ್ತಿದ್ದಾರೆ.ರೈಲ್ವೇ ಹಳಿ ಮೇಲೆ ಬಿದ್ದಿರುವ ಮಣ್ಣನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.