
ಬೆಳಗಾವಿ: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳು ನಿರೀಕ್ಷೆಯಂತೆ ಫಲಿತಾಂಶ ದಾಖಲಿಸಿಲ್ಲ. ಅದರಲ್ಲೂ ಸರ್ಕಾರಿ, ಅನುದಾನ ರಹಿತ ಪ್ರೌಢ ಶಾಲೆಗಳಿಗಿಂತ, ಅನುದಾನಿತ ಪ್ರೌಢಶಾಲೆಗಳೇ ಉತ್ತಮ ಫಲಿತಾಂಶ ದಾಖಲಿಸುವಲ್ಲಿ ಹಿಂದೆ ಬಿದ್ದಿವೆ.

j3tvkannada
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೇ 62.16, ಚಿಕ್ಕೋಡಿ ಶೇ 62.12ರಷ್ಟು ಫಲಿತಾಂಶ ದಾಖಲಿಸಿದೆ. ಈ ಪೈಕಿ ಇಡೀ ಜಿಲ್ಲೆಯಲ್ಲಿ 142 ಪ್ರೌಢಶಾಲೆಗಳಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ದಾಖಲಾಗಿದೆ.
ಇದರಲ್ಲಿ 70 ಅನುದಾನಿತ, 43 ಅನುದಾನರಹಿತ, 29 ಸರ್ಕಾರಿ ಶಾಲೆಗಳಿವೆ. ಇವುಗಳಿಗೆ ನೋಟಿಸ್ ಜಾರಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸಲ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆ ವರ್ಷವಿಡೀ ಶೈಕ್ಷಣಿಕ ಚಟುವಟಿಕೆ ಕೈಗೊಂಡಿತ್ತು.
ಪ್ರೌಢಶಾಲೆ ಶಿಕ್ಷಕರಿಗೆ ವಿಷಯವಾರು ಕಾರ್ಯಾಗಾರ, ಮಕ್ಕಳ ಕಲಿಕಾ ಮಟ್ಟ ಸುಧಾರಣೆಗಾಗಿ ಅಭಿಪ್ರೇರಣಾ ತರಗತಿ, ಶಾಲಾ ಹಂತದಲ್ಲಿ ರಸಪ್ರಶ್ನೆ ಮತ್ತಿತರ ಸ್ಪರ್ಧೆ ಆಯೋಜಿಸಿತ್ತು. ಮನೆಯಲ್ಲೂ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕಾಗಿ ಪ್ರತಿ ನಾಲ್ಕನೇ ಶನಿವಾರ ಆಯಾ ಶಾಲೆಗಳಲ್ಲಿ ಪಾಲಕರ ಸಭೆ ನಡೆಸಿತ್ತು. ಆದರೆ, ಇವು ನಿರೀಕ್ಷೆಯಂತೆ ಫಲ ಕೊಟ್ಟಿಲ್ಲ. ಜಿಲ್ಲೆಯ ಕೆಲವು ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಯಿಂದ ಬಳಲುತ್ತಿವೆ.
ಸೇವಾ ನಿವೃತ್ತಿಯಿಂದ ತೆರವಾದ ಹುದ್ದೆ ಭರ್ತಿಯಾಗಿಲ್ಲ. ಪ್ರತಿ ವಿಷಯದ ಪಠ್ಯಕ್ರಮ ಬೋಧನೆಗೆ ನಿರ್ದಿಷ್ಟ ಶಿಕ್ಷಕರಿಲ್ಲ. ಹಾಗಾಗಿ ಒಂದು ವಿಷಯದ ಶಿಕ್ಷಕರು ಮತ್ತೊಂದು ವಿಷಯ ಬೋಧಿಸುವ ಪರಿಸ್ಥಿತಿ ಇದೆ.
ವಿದ್ಯಾರ್ಥಿಗಳು ಧೀರ್ಘಾವಧಿಗೆ ರಜೆ ಇರುವುದು ಕಂಡು ಬಂದಿದೆ. ಈ ಕಾರಣದಿಂದಲೂ ಫಲಿತಾಂಶದಲ್ಲಿ ಹಿನ್ನಡೆ ಆಗಿರಬಹುದು. ಸರ್ಕಾರಿ, ಅನುದಾನರಹಿತ ಶಾಲೆಗಳು ಬೇರೆ ಬೇರೆ ಸಮಸ್ಯೆ ಎದುರಿಸುತ್ತಿವೆ. ಹಾಗಾಗಿ ಫಲಿತಾಂಶ ಕುಸಿತಕ್ಕೆ ನಿಖರವಾದ ಕಾರಣ ಪತ್ತೆ ಹಚ್ಚಿ ತಪ್ಪು ಸರಿಪಡಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.