
ಕೋಲಾರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪಾತಾಳಕ್ಕೆ ಕುಸಿದಿರುವ ಕೋಲಾರ ಜಿಲ್ಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಸು ಸುಧಾರಣೆ ಕಂಡಿದ್ದರೂ ಟಾಪ್ 10 ಕನಸು ಈ ಬಾರಿಯೂ ಈಡೇರಿಲ್ಲ.

j3tvkannada
ಉತ್ತಮ ಸಾಧನೆ ಮಾಡುತ್ತಿದ್ದ ಜಿಲ್ಲೆಯು ಕಳೆದ ವರ್ಷ 20ನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಅಲ್ಪ ಮೇಲೇರಿ ರಾಜ್ಯ ಮಟ್ಟದಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಅಗ್ರ ಹತ್ತರೊಳಗಿನ ಸ್ಥಾನದ ಗುರಿಯೊಂದಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ, ಡಿ.ಡಿ.ಪಿ.ಐ ಕೃಷ್ಣಮೂರ್ತಿ ನೇತೃತ್ವದಲ್ಲಿ ಹತ್ತಾರು ಕಸರತ್ತು ನಡೆಸಲಾಗಿತ್ತು.
ಕನಿಷ್ಠ ಹತ್ತರೊಳಗೆ ಸ್ಥಾನ ಪಡೆಯಬೇಕೆಂದು ಕೆ.ಡಿ.ಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಹಾಗೂ ಶಾಸಕರು ತಾಕೀತು ಮಾಡಿದ್ದರು. ತಪ್ಪಿದರೆ ತಲೆದಂಡ ಎಚ್ಚರಿಕೆಯನ್ನೂ ನೀಡಿದ್ದರು. ಡಿ.ಡಿ.ಪಿ.ಐ ಹಾಗೂ ಮುಖ್ಯ ಶಿಕ್ಷಕರನ್ನು ಹೊಣೆ ಮಾಡುವುದಾಗಿ ಹೇಳಿದ್ದರು.
ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಹೋಗುತ್ತಿಲ್ಲ. ಎಷ್ಟು ಮಂದಿ ಸರ್ಕಾರಿ ಶಾಲೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದ್ದರು.
ಇಷ್ಟಾಗಿಯೂ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಮಕ್ಕಳು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅಧಿಕಾರಿಗಳು ವಿನೂತನ ಪ್ರಯೋಗ ಹಾಕಿದರೂ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಪ್ರಯತ್ನ ಸಾಕಾಗಲಿಲ್ಲ. ಅತಿಯಾದ ಆತ್ಮವಿಶ್ವಾಸ ಮುಳುವಾಗಿದೆ ಎನ್ನಲಾಗುತ್ತಿದೆ. ಡಿ.ಡಿ.ಪಿ.ಐ ನೇತೃತ್ವದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗಿತ್ತು. ವಿಶೇಷ ತರಗತಿಗಳನ್ನು ನಡೆಸಿ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ಹೆಚ್ಚು ಗಮನ ಹರಿಸಲಾಗಿತ್ತು. ಅದರಲ್ಲೂ ಬಾಲಕರ ಫಲಿತಾಂಶ ಪದೇ ಪದೇ ಕಡಿಮೆ ಆಗುತ್ತಿರುವುದರಿಂದ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆಯು ಈ ವರ್ಷವೂ ನನ್ನನ್ನೊಮ್ಮೆ ಗಮನಿಸಿ, ಚಿತ್ರ ಬಿಡಿಸು ಅಂಕ ಗಳಿಸು, ಅಭ್ಯಾಸ ಹಾಳೆಗಳು ಪುಸ್ತಕಗಳನ್ನು ಶಾಲೆಗಳಿಗೆ ನೀಡಿ ಅಭ್ಯಾಸ ಮಾಡಿಸಲಾಗಿತ್ತು. ಪೋಷಕರು ಹಾಗೂ ವಿಶೇಷವಾಗಿ ತಾಯಂದಿರ ಸಭೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆ ಸಿದ್ಧತೆ ಬಗ್ಗೆ ಚರ್ಚಿಸಲಾಗಿತ್ತು. ಆದಾಗ್ಯೂ ಹತ್ತರೊಳಗಿನ ಸ್ಥಾನ ಗಗನ ಕುಸುಮವಾಗಿಯೇ ಉಳಿದಿದೆ. ಪೂರ್ವ ತಯಾರಿ ಪರೀಕ್ಷೆಗಳಲ್ಲೇ ಈ ಸೂಚನೆ ಸಿಕ್ಕಿತ್ತು.