ಹಾಸನ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿ ಸಾವಿನಲ್ಲೇ ಅಂತ್ಯ ಕಾಣುವುದು ಸಾಮಾನ್ಯವಾಗಿದೆ. ಇನ್ನೊಂದೆಡೆ ಪ್ರಿಯಕರನೊಂದಿಗೆ ಅಥವಾ ಪ್ರಿಯತಮೆಯೊಂದಿಗೆ ಪರಾರಿಯಾಗುವುದು ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಪ್ರಿಯಕರನ ಜೊತೆ ಪತ್ನಿ ಪರಾರಿಯಾದ ಹಿನ್ನೆಲೆ ಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಆತ್ಮಹತ್ಯೆಗೆ ಶರಣಾದ ಪತಿ. ರವಿಯ ಪತ್ನಿ ಕೆಲ ದಿನಗಳ ಹಿಂದೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದರು.
ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮನನೊಂದ ರವಿ ಶನಿವಾರ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ರವಿಯ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯುತ್ತಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.