
ಬೀದರ್: ತಾಲ್ಲೂಕಿನಲ್ಲಿ ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆ ಜಲಮೂಲಗಳು ನಿಧಾನವಾಗಿ ಬತ್ತುತ್ತಿವೆ. ಸಾರ್ವಜನಿಕರಿಗೆ, ಜಾನುವಾರುಗಳಿಗೆ ನೀರಿನ ಸಮಸ್ಯೆ ಸೂರ್ಯನ ಶಾಖದಂತೆ ಹೆಚ್ಚುತ್ತಿದೆ. ಮೇ ತಿಂಗಳ ಎರಡು ಮತ್ತು ಮೂರನೇ ವಾರದಲ್ಲಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಸೆಲೆ ಬತ್ತಿ ಹೋಗಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ. ಸದ್ಯ ನೀರಿನ ಸಮಸ್ಯೆ ಇರುವ ತಾಲ್ಲೂಕಿನ ಗುಂಜರ್ಗಾ, ಲಾಧಾ, ಕಾಕನಾಳ, ಸಿದ್ದೇಶ್ವರ ವಾಡಿ, ನೇಳಗಿ, ಮಾವಿನಹಳ್ಳಿ ಸೇರಿದಂತೆ 9 ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಇನ್ನು ಹರಿವಾಡಿ ಗರ್ಮಾ ತಾಂಡಾ, ಕೆರೂರ, ಅಹಮದಾಬಾದ್ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ನಮ್ಮ ಗ್ರಾಮದಲ್ಲಿ ಈಚೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಯಿಸಲಾಗಿತ್ತು. ಆದರೆ, ಅದರಲ್ಲಿ ನೀರು ದೊರೆಯಲಿಲ್ಲ. ಸದ್ಯ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಒಂದು ಕೈ ಪಂಪ್ ಮಾತ್ರ ಆಧಾರವಾಗಿದೆ. ತುಂಬಾ ಹೊತ್ತು ಪ್ರಯತ್ನಿಸಿದ ನಂತರ ಈ ಕೈಪಂಪಿನಲ್ಲಿ ನೀರು ಮೇಲಕ್ಕೆ ಬರುತ್ತದೆ. ಹಾಗಾಗಿ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಜೈನಾಪುರ ಗ್ರಾಮಸ್ಥರು ಅಳಲು ತೋಡಿಕೊಂಡರು ನೀರಿನ ಸಮಸ್ಯೆ ಪರಿಹಾರಕ್ಕೆ ಈಚೆಗೆ ಕೆಲ ದಿನಗಳವರೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿತ್ತು. ನೀರು ಕುಡಿಯಲು ಯೋಗ್ಯವಾಗಿರಲಿಲ್ಲ ಎಂದು ಗ್ರಾಮಸ್ಥರು ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯರಾದ ಸಂಗಮೇಶ್ವರ ಜ್ಯಾಂತೆ ತಿಳಿಸಿದರು. ದಿನಬಳಕೆಗೆ ಹಾಲಹಿಪ್ಪರ್ಗಾ ಕೆರೆಯಿಂದ ನೀರು ಬರುತ್ತದೆ.

j3tvkannada
ಆ ನೀರಿನ ಬಳಕೆಯಿಂದ ಚರ್ಮರೋಗ ಉಂಟಾಗುತ್ತಿದೆ. ಈ ಕೆರೆಯ ನೀರನ್ನು ಶುದ್ದೀಕರಣಗೊಳಿಸಿ ಸರಬರಾಜು ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಇನ್ನೊಂದು ಕೊಳವೆಬಾವಿ ಕೊರೆಸಬೇಕು ಎಂಬುದು ಜೈನಾಪುರ ಗ್ರಾಮಸ್ಥರ ಒತ್ತಾಯವಾಗಿದೆ. ಗ್ರಾಮದ ನೀರಿನ ಸಮಸ್ಯೆ ಪರಿಹಾರಕ್ಕೆ ಎರಡು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಈಗ ಒಂದರಲ್ಲಿ ನೀರಿನ ಲಭ್ಯತೆ ತುಂಬಾ ಕಡಿಮೆಯಾಗಿದೆ. ಹಾಗಾಗಿ, ಕೆಲವೊಮ್ಮೆ ಸ್ವಲ್ಪ ಸಮಯವೇ ನೀರು ಹರಿಸಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ನಮಗೆ ಕಾಡುತ್ತಿದೆ ಎನ್ನುತ್ತಾರೆ ಗುಂಜರ್ಗಾದ ಹಿತೇಂದ್ರ ಪಾಟೀಲ ಸೇರಿದಂತೆ ಗ್ರಾಮಸ್ಥರು.
ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರಿ ಶಾಲೆಯಲ್ಲಿರುವ ಕೊಳವೆ ಬಾವಿಯ ಆಳವನ್ನು ಹೆಚ್ಚಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮೇ ತಿಂಗಳಿನಲ್ಲಿ ಸಮಸ್ಯೆ ಹೆಚ್ಚಾದಲ್ಲಿ ನೀರಿನ ಸದ್ಬಳಕೆಗೆ ಗ್ರಾಮದ 6 ಮಿನಿ ವಾಟರ್ ಟ್ಯಾಂಕ್ಗಳಲ್ಲಿ ನೀರು ಸಂಗ್ರಹಿಸಿ ಸರಬರಾಜು ಮಾಡಲಾಗುತ್ತದೆ ಎಂದು ಪಿ.ಡಿ.ಒ ಧೋಂಡಿಬಾ ಬೊಮಣೆ ತಿಳಿಸಿದರು. ಕಳೆದ ಎರಡು ದಿನಗಳಿಂದ ಮೋಟಾರ್ ಸುಟ್ಟಿರುವುದರಿಂದ ಮನೆ ಮನೆಗೆ ನೀರು ಬರುತ್ತಿಲ್ಲ. ಸುಡು ಬಿಸಿಲಿನಲ್ಲಿ ಮಿನಿ ವಾಟರ್ ಟ್ಯಾಂಕ್ಗಳಿಗೆ ತೆರಳಿ ನೀರು ತರುತ್ತಿದ್ದೇವೆ ಎಂದು ಕೋಸಂ ಗ್ರಾಮದ ಜೈಭೀಮ ಅಳಲು ತೋಡಿಕೊಂಡರು.