
ಬೆಳಗಾವಿ: ಒಂಬತ್ತು ವರ್ಷಗಳ ಹಿಂದಿನ ಅಪಘಾತ ಈ ಯುವಕನ ಕನಸುಗಳನ್ನೇ ನುಚ್ಚುನೂರು ಮಾಡಿತ್ತು. ಬೆನ್ನುಹುರಿ ಮುರಿತ ಬದುಕನ್ನೇ ಹಿಂಡಿ ಹಿಪ್ಪೆಗೊಳಿಸಿತು. ಹಾಸಿಗೆ ಮೇಲೆಯೇ ಜೀವನ. ಆಸ್ಪತ್ರೆಗೆ ಅಲೆದಾಟ. ಈ ಸಂಕಷ್ಟವನ್ನೆಲ್ಲ ಮೆಟ್ಟಿ ನಿಂತು ಈಗ ಸ್ವಾಭಿಮಾನದಿಂದ ದುಡಿಯುತ್ತಿದ್ದಾರೆ. ಗಾಲಿಕುರ್ಚಿ ಮೂಲಕ ಇಡೀ ನಗರ ಸುತ್ತಿ, ಮನೆ ಮನೆಗೆ ‘ಫುಡ್ ಡೆಲಿವರಿ’ ಮಾಡುತ್ತಿದ್ದಾರೆ. ನಗರ ನಿವಾಸಿ ರಾಮದುರ್ಗ ತಾಲ್ಲೂಕಿನ ಚನ್ನಾಪುರ ತಾಂಡೆ ಮೂಲದ ಕೃಷ್ಣಾವೆಂಕಪ್ಪ ಲಮಾಣಿ (34) ಯಶೋಗಾಥೆ.
ಐ.ಟಿ.ಐ ಕೋರ್ಸ್ ಓದಿರುವ ಕೃಷ್ಣಾ, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು.

j3tvkannada
ಬದುಕು ಸುಗಮವಾಗಿ ಸಾಗಿತ್ತು. 2016ರಲ್ಲಿ ಅವರು ಸಂಚರಿಸುತ್ತಿದ್ದ ಆಟೊ ಪಲ್ಟಿಯಾಗಿ ಬೆನ್ನುಹುರಿ ಮುರಿಯಿತು. ಎರಡೂ ಕಾಲು ಸ್ವಾಧೀನ ಕಳೆದುಕೊಂಡು, ಎದ್ದು ನಿಲ್ಲಲಾಗದ ಸ್ಥಿತಿ ಬಂತು. ಚಿಕಿತ್ಸೆ ಪಡೆದರೂ ತ್ವರಿತವಾಗಿ ಗುಣಮುಖರಾಗಲಿಲ್ಲ. ಸತತವಾಗಿ ಹಾಸಿಗೆ ಮೇಲೆ ಮಲಗಿದ್ದರಿಂದ ಸಾಲು ಸಾಲು ಆರೋಗ್ಯ ಸಮಸ್ಯೆ ಎದುರಾದವು. ಶರೀರಕ್ಕಾದ ಗಾಯ ಮಾಯಲಿಲ್ಲ. ಖಿನ್ನತೆಗೂ ಒಳಗಾಗಿ ಬದುಕಿನ ಮೇಲೆ ಅಸೆಯನ್ನೇ ಕೈಚೆಲ್ಲಿದ್ದರು.
ಆಗ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ)ಯವರು ಕೃಷ್ಣಾ ನೆರವಿಗೆ ಧಾವಿಸಿದರು. ಮಾನಸಿಕವಾಗಿ ಧೈರ್ಯ ತುಂಬುವ ಜತೆಗೆ, ಕೆಲವರ ನೆರವಿನಿಂದ ವೈದ್ಯಕೀಯ ಚಿಕಿತ್ಸೆ ಒದಗಿಸಿದರು. ಮೆಡಿಕಲ್ ಕಿಟ್ ವಿತರಿಸಿದರು. ಸೆಲ್ನೋ ಫೌಂಡೇಷನ್ನವರು ಬ್ಯಾಟರಿಚಾಲಿತ ಗಾಲಿಕುರ್ಚಿ ಕೊಟ್ಟರು. ಈಗ ಅದರ ನೆರವಿನಿಂದ ಕೃಷ್ಣಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಕಳೆದ ಎಂಟು ತಿಂಗಳಿಂದ ಹೋಟೆಲ್ಗಳಿಂದ ಮನೆ-ಮನೆಗೆ ಆಹಾರ ಪೂರೈಸುತ್ತಿದಾರೆ.

j3tvkananda
ಕೂಲಿ ಕೆಲಸ ಮಾಡುತ್ತಿದ್ದ ತಂದೆ ಈಗ ಮನೆಯಲ್ಲೇ ಇದ್ದಾರೆ. ಕುಟುಂಬದವರು ವಾಚಮನ್ ಕೆಲಸ ಮಾಡುವ ಕಡೆಯಲ್ಲೇ ಸಣ್ಣ ಕೊಠಡಿಯಲ್ಲಿ ವಾಸವಿದ್ದೇವೆ. ಗುಜರಾತ್ನಲ್ಲಿ ನಡೆದ ಅಪಘಾತದಲ್ಲಿ ಸಹೋದರನೂ ಮೃತಪಟ್ಟಿದ್ದಾನೆ. ನನ್ನ ಚಿಕಿತ್ಸೆಗೇ ಹೆಚ್ಚಿನ ಹಣ ಖರ್ಚಾಗಿದೆ. ಹಾಗಾಗಿ ಕಷ್ಟ-ಸುಖ ಎನ್ನದೆ ನಾನೇ ಮನೆ ಜವಾಬ್ದಾರಿ ನಿಭಾಯಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಕೃಷ್ಣಾ ಲಮಾಣಿ ತಿಳಿಸಿದರು. ಬೆಳಿಗ್ಗೆ 7ರಿಂದ 10ರವರೆಗೆ, ಮಧ್ಯಾಹ್ನ 12ರಿಂದ ಸಂಜೆ 6 ರವರೆಗೆ ಫುಡ್ ಡೆಲಿವರಿ ಕೆಲಸ ಮಾಡುತ್ತೇನೆ. ಇದರಲ್ಲಿ ಬರುವ ವೇತನ ಮತ್ತು ಮಾಸಿಕ ₹1,400 ಅಂಗವಿಕಲರ ಮಾಸಾಶನದಲ್ಲೇ ಬದುಕಿನ ಬಂಡಿ ದೂಡುತ್ತಿದ್ದೇನೆ. ಎಂಥವರ ಬದುಕಿನಲ್ಲಿಯೂ ಕಷ್ಟ ಎದುರಾಗುತ್ತವೆ. ಅವುಗಳಿಗೆ ಎದೆಗುಂದದೆ ಮುನ್ನಡೆದಾಗ ಬದುಕು ಸಾರ್ಥಕವಾಗುತ್ತದೆ ಎನ್ನುತ್ತ ತಮ್ಮ ಕಾಯಕಕ್ಕೆ ಅಣಿಯಾದರು.