
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,395ಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮೊದಲ ಸಾವು ಸಂಭವಿಸಿದ್ದು, ಉಳಿದ ರಾಜ್ಯಗಳಲ್ಲೂ ಕೊರೊನಾದಿಂದ ಮೃತಪಟ್ಟಿರವುದು ವರದಿಯಾಗಿದೆ. ಓಮಿಕ್ರಾನ್ ಉಪ-ತಳಿಗಳಾದ ಎನ್ಬಿ.1.8.1 ಮತ್ತು ಎಲ್ಎಫ್.7 ಹರಡುವಿಕೆಯಿಂದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ತಜ್ಞರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಗುಂಪು ಸೇರುವುದನ್ನು ತಪ್ಪಿಸಲು ಸೂಚಿಸಲಾಗಿದೆ.

j3tvkannada
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಐಸಿಎಂಆರ್ ಹೇಳಿದೆ. ಇನ್ನು ಕೋವಿಡ್-19 ಸಿದ್ಧತೆಗಳ ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಒಂದೇ ಸಮನೆ ಹೆಚ್ಚಾಗುತ್ತಿವೆ. ವಾರದ ಹಿಂದೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,000 ಕ್ಕಿಂತ ಸ್ವಲ್ಪವೇ ಹೆಚ್ಚಿತ್ತು. ಈಗ ಅದು ಮೂರು ಪಟ್ಟಿಗಿಂತ ಹೆಚ್ಚು ಏರಿಕೆ ಕಂಡಿದೆ.
ಕೇರಳದಲ್ಲಿ ಅತಿ ಹೆಚ್ಚು ಅಂದರೆ 1,336 ಸಕ್ರಿಯ ಪ್ರಕರಣಗಳಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 40 ಕ್ಕಿಂತ ಹೆಚ್ಚು. ಮಹಾರಾಷ್ಟ್ರದಲ್ಲಿ ಸುಮಾರು 467 ಸಕ್ರಿಯ ಪ್ರಕರಣಗಳಿದ್ದು, ದಿಲ್ಲಿಯಲ್ಲಿ ಸುಮಾರು 375 ಪ್ರಕರಣಗಳು ವರದಿಯಾಗಿವೆ. ಇದಲ್ಲದೆ ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಸೋಂಕುಗಳು ಹೆಚ್ಚುತ್ತಿದ್ದು ಈ ಎಲ್ಲಾ ರಾಜ್ಯಗಳಲ್ಲೂ 100 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

j3tvkannada
ದಿಲ್ಲಿಯಲ್ಲಿ ಹೊಸ ಕೊರೊನಾ ಅಲೆಯಲ್ಲಿ ಮೊದಲ ಸೋಂಕಿತರು ಸಾವನ್ನಪ್ಪಿದ್ದು, ಹಲವು ರೋಗಗಳಿಂದ ಬಳಲುತ್ತಿದ್ದ 60 ವರ್ಷದ ಮಹಿಳೆ ಅಸುನೀಗಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಏಳು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಈ ಮೂಲಕ ಈ ಬಾರಿಯ ಕೊರೊನಾ ಅಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 26 ಕ್ಕೆ ಏರಿದೆ. ಕಳೆದ ಒಂದು ದಿನದಲ್ಲಿ ಮಹಾರಾಷ್ಟ್ರದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ದಿಲ್ಲಿ, ಗುಜರಾತ್, ಕರ್ನಾಟಕ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ.
ಸೋಂಕುಗಳು ಹೆಚ್ಚುತ್ತಿದ್ದರೂ ಸಾರ್ವಜನಿಕರು ಭಯಪಡಬಾರದೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕರಾದ ಡಾ. ರಾಜೀವ್ ಬಹ್ಲ್ ಪ್ರಸ್ತುತ ಅಲೆ ಸೌಮ್ಯವಾಗಿದ್ದು ನಿರ್ವಹಿಸಬಹುದಾಗಿದೆ ಎಂದು ನಾಗರಿಕರಿಗೆ ಭರವಸೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಲವು ಸೂಚನೆಗಳನ್ನು ಕೂಡ ನೀಡಿದೆ. ರಾಜ್ಯಗಳು ತಮ್ಮ ಕೋವಿಡ್-19 ಸಿದ್ಧತೆಗಳ ಬಗ್ಗೆ ವರದಿ ನೀಡಲು ತಿಳಿಸಿದೆ. ಆಸ್ಪತ್ರೆಗಳಲ್ಲಿ ಸೌಲಭ್ಯಗಳು, ಆಮ್ಲಜನಕ ಪೂರೈಕೆ, ಔಷಧಿಗಳು ಮತ್ತು ಅಗತ್ಯ ಉಪಕರಣಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದೆ. ಜೂನ್ 2 ರೊಳಗೆ ವರದಿಗಳನ್ನು ಸಲ್ಲಿಸಲು ಹೇಳಿದೆ.