
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ನಡುವಿನ ಪ್ರಯಾಣವನ್ನು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಡಿಮೆ ಮಾಡಿದೆ. ಈ ಮಾರ್ಗದಲ್ಲಿ ವಾಹನ ಸವಾರರ ಬೇಡಿಕೆಯಂತೆ ಹಲವು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಈ ಹೆದ್ದಾರಿಯಲ್ಲಿ ಹೊಸ ಎಂಟ್ರಿ ಮತ್ತು ಎಕ್ಸಿಟ್ ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ. ಎನ್. ಮಂಜುನಾಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಚನ್ನಪಟ್ಟಣ ಶಾಸಕ ಸಿ. ಪಿ. ಯೋಗೇಶ್ವರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಂಸದರು ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ.

j3tvkannada
ಸಂಸದ ಡಾ. ಸಿ. ಎನ್. ಮಂಜುನಾಥ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಚನ್ನಪಟ್ಟಣ ಶಾಸಕರಾದ ಸಿ. ಪಿ. ಯೋಗೇಶ್ವರ ಅವರ ಜೊತೆಗೂಡಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಗೆ ಚನ್ನಪಟ್ಟಣ ತಾಲ್ಲೂಕಿನಿಂದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ರಾಂಪುರ ಬಳಿ ಉದ್ದೇಶಿತ ಜಾಗವನ್ನು ಪರಿಶೀಲಿಸಿದೆ ಎಂದು ಪೋಸ್ಟ್ ಹಾಕಿದ್ದಾರೆ. ರಾಂಪುರ ಬಳಿ ಪ್ರವೇಶ ಮತ್ತು ನಿರ್ಗಮನ ಕಲ್ಪಿಸುವುದರಿಂದ ಚನ್ನಪಟ್ಟಣ ತಾಲ್ಲೂಕಿನ ಜನತೆಗೆ ತೊಂದರೆಯಾಗಲಿದ್ದು ಈ ವ್ಯವಸ್ಥೆಯನ್ನು ಕಣ್ವ ಜಂಕ್ಷನ್ ಬಳಿ ಕಲ್ಪಿಸಿದರೆ ಚನ್ನಪಟ್ಟಣ ಸೇರಿದಂತೆ, ಕಣ್ವ ಜಲಾಶಯ, ಕೆಂಗಲ್ ದೇವಸ್ಥಾನ ಮತ್ತು ಹಳೆ ಎನ್ಹೆಚ್f75ಕ್ಕೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆ ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೂ ಮನವಿ ಸಲ್ಲಿಸಲಾಗಿದ್ದು ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ. ಆದ್ದರಿಂದ ಕೆಲವೇ ದಿನಗಳಲ್ಲಿ ಕಣ್ವ ಜಂಕ್ಷನ್ ಬಳಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಎಂಟ್ರಿ & ಎಕ್ಸಿಟ್ ನಿರ್ಮಾಣವಾಗಲಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಮೂರು ಕಡೆಗಳಲ್ಲಿ ಸ್ಕೈ ವಾಕ್ ನಿರ್ಮಾಣವಾಗಲಿದೆ. ಅಲ್ಲದೇ ಚನ್ನಪಟ್ಟಣದಲ್ಲಿ ಟಾಯ್ಸ್ ಪಾರ್ಕ್ ಕೂಡಾ ನಿರ್ಮಾಣವಾಗಲಿದೆ. ಅದಕ್ಕೆ ಜಾಗವನ್ನು ಗುರುತು ಮಾಡಲಾಗಿದೆ. ವಾಹನ ಸವಾರರ ಬೇಡಿಕೆಯಂತೆ ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತದೆ ಎಂದು ಸಂಸದರು ಭರವಸೆ ನೀಡಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಗರದ ನಡುವಿನ ಸಂಚಾರದ ಅವಧಿಯನ್ನು ಕಡಿಮೆ ಮಾಡಲು ಈ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡಲಿದೆ.

j3tvkannada
ಕರ್ನಾಟಕದ ಮೊದಲ ಎಕ್ಸ್ಪ್ರೆಸ್ ವೇ ಎಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಪ್ರವೇಶ ನಿಯಂತ್ರಿತ ಹೆದ್ದಾರಿಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಹೆದ್ದಾರಿಯಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು 1/8/2023 ರಿಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ಎಕ್ಸ್ಪ್ರೆಸ್ ವೇನಲ್ಲಿ ನಿಷೇಧಿಸಲಾಗಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಹೆದ್ದಾರಿಯ ಎರಡೂ ಬದಿಯಲ್ಲಿ ಒದಗಿಸಲಾದ 7 ಮೀಟರ್ ಅಗಲದ, ದ್ವಿಪಥದ ಸೇವಾ ರಸ್ತೆಯನ್ನು ಶುಲ್ಕ ರಹಿತವಾಗಿ ಬಳಕೆ ಮಾಡಬಹುದು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅತಿ ವೇಗದ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ವಿವಿಧ ರೀತಿಯ ಮೋಟಾರು ವಾಹನಗಳಿಗೆ ಗಂಟೆಗೆ 80-100 ಕಿ. ಮೀ. ವೇಗದ ಮಿತಿಯನ್ನು ನಿಗದಿ ಮಾಡಲಾಗಿದೆ. ಅತಿ ವೇಗದ ಚಾಲನೆಯನ್ನು ಪತ್ತೆ ಹಚ್ಚಿ ದಂಡವನ್ನು ವಿಧಿಸಲು ಹೆದ್ದಾರಿಯಲ್ಲಿ ಎ.ಐ ಆಧಾರಿತ ಕ್ಯಾಮರಾಗಳನ್ನು ಜೋಡಿಸಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈಗ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಹೆದ್ದಾರಿಯಲ್ಲಿ ಸುರಕ್ಷತೆಯನ್ನು ಕಾಪಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಜನರ ಸುರಕ್ಷಿತ ಮತ್ತು ಸುಗಮ ಪ್ರಯಾಣ ಖಚಿತಪಡಿಸಿಕೊಳ್ಳಲು ಎನ್.ಹೆಚ್.ಎ.ಐ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.