
ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಂಪಸಂದ್ರದಲ್ಲಿ ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಭಾನುವಾರ ನಡೆದಿದ್ದ ಸಂಘರ್ಷವನ್ನು ಶಮನಗೊಳಿಸಲು ಸೋಮವಾರ ಶಾಂತಿಸಭೆ ನಡೆಯಿತು.
ನಗರದ ಪ್ರಜಾ ಸೌಧದಲ್ಲಿ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಅಧ್ಯಕ್ಷತೆಯಲ್ಲಿ ನಡೆದ ಎರಡು ಸಮುದಾಯಗಳ ಮುಖಂಡರ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಯಿತು. ಆಯಾಯ ಸಮುದಾಯದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಎರಡು ಸಮುದಾಯದ ಮುಖಂಡರನ್ನು ಒಟ್ಟಿಗೆ ಕೂರಿಸಿ ಶಾಂತಿಸಭೆ ನಡೆಸಿ, ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಲಾಯಿತು.
ಯಾರೋ ಕೆಲವರು ಮಾಡಿರುವ ಕೆಲಸಕ್ಕೆ ಸಮುದಾಯದ ಮಧ್ಯ ಬಿರುಕು ಮೂಡಬಾರದು. ತಾಲ್ಲೂಕು ಶಾಂತಿ ಸೌಹಾರ್ದತೆ ನೆಲೆಸಿದೆ. ವಾಲ್ಮೀಕಿ ಮತ್ತು ಅಂಬೇಡ್ಕರ್ ಸಮಾಜದ ಆದರ್ಶ ವ್ಯಕ್ತಿಗಳು. ಇಂತಹ ಮಹಾನುಭಾವರ ಪ್ರತಿಮೆ ವಿಚಾರದಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆದಿವೆ. ಯಾರು ಸಹ ಉದ್ವೇಗಕ್ಕೆ ಒಳಗಾಗದೆ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಸರ್ಕಾರ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ, ಮುಂದಿನ ನಿರ್ಧಾರ ಕೈ ಗೊಳ್ಳುತ್ತವೆ. ಅಲ್ಲಿಯವರೆಗೆ ಎರಡು ಸಮುದಾಯದ ಮುಖಂಡರು ಯುವಕರಿಗೆ ದುಡುಕಿನ ನಿರ್ಧಾರ ಕೈ ಗೊಳ್ಳದಂತೆ ತಾಕೀತು ಮಾಡಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.

j3tvkannada
ತಹಶೀಲ್ದಾರ್ ಮಹೇಶ್ ಪತ್ರಿ, ಮಹರ್ಷಿ ವಾಲ್ಮೀಕಿ ರಾಮರಾಜ್ಯ ಕನಸು ಕಂಡವರು, ಅಂಬೇಡ್ಕರ್ ರಾಮರಾಜ್ಯ ಕನಸು ನನಸು ಮಾಡಲು ಪ್ರಯತ್ನಿ ಸಿದವರು. ಯಾರೋ ಕೆಲವರು ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಎರಡು ಸಮುದಾಯದ ಮುಖಂಡರಿಗೂ ಪರಿಸ್ಥಿತಿ ತಿಳಿಸಲಾಗಿದೆ. ಸರ್ಕಾರದ ಜಾಗದ ದಾಖಲೆ ಪರಿಶೀಲನೆ ನಡೆಸಿ, ಮೇಲಾಧಿಕಾರಿಗಳ ಸಲಹೆ ಸೂಚನೆ ಪಡೆದು ನಿರ್ಧಾರ ಕೈ ಗೊಳ್ಳಲಾಗುವುದು. ಅಲ್ಲಿಯವರೆಗೆ, ಎಲ್ಲರೂ ಯಾವುದೇ ಸಂಭ್ರಮಾಚರಣೆ ಯಾಗಲಿ, ಪಟಾಕಿ ಸಿಡಿಸುವುದಾಗಲಿ, ಮಾಡದೇ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಮತ್ತು ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಸಂಬಂಧ ಆರಂಭವಾದ ವಿವಾದ ಭಾನುವಾರ ತೀವ್ರ ಸಂಘರ್ಷದ ಸ್ವರೂಪ ಪಡೆದಿತು. ಪ್ರತಿಮೆ ಸ್ಥಾಪನೆ ಸಂಬಂಧ ಎರಡೂ ಸಮುದಾಯಗಳ ಜನರ ಮಧ್ಯೆ ಆರಂಭವಾದ ಮಾತಿನ ಚಕಮಕಿ ಪರಸ್ಪರ ಕಲ್ಲು ತೂರಾಟ ನಡೆಸುವ ಹಂತಕ್ಕೆ ತಲುಪಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ತಹಶೀಲ್ದಾರ್ ಮಹೇಶ್ ಪತ್ರಿ ಸೇರಿದಂತೆ ಅಧಿಕಾರಿಗಳು ನಡೆಸಿದ ಶಾಂತಿ ಸಭೆಯೂ ವಿಫಲವಾಗಿತ್ತು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತು.