
ಉಡುಪಿ: ತಾಲ್ಲೂಕಿನ ವಂಡ್ರೆ-ನೆಂಪು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಬಹುಪಯೋಗಿ ಸಾಂಸ್ಕೃತಿಕ ಸಭಾಭವನ ನಿರ್ಮಾಣದ ಹಿಂದೆ ಹಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಣಾಭಿಮಾನಿಗಳದೇ ಸಂಪೂರ್ಣ ಪರಿಶ್ರಮ. ಅಂದಾಜು ₹1.25 ಕೋಟಿ ವೆಚ್ಚದಲ್ಲಿ ಈ ಕಟ್ಟಡ ಸಿದ್ದಗೊಂಡಿದೆ.

j3tvkannada
ಸಹ್ಯಾದ್ರಿಯ ತಪ್ಪಲು, ಮಲೆನಾಡಿನ ಪ್ರಕೃತಿ ರಮಣೀಯ ಪರಿಸರದ 25ಕ್ಕೂ ಅಧಿಕ ಹಳ್ಳಿಗಳ ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದ ನಂತರ ಕುಂದಾಪುರಕ್ಕೆ ಬರಬೇಕಾದ ಅನಿವಾರ್ಯತೆ ಇತ್ತು. ಶಾಸಕರಾಗಿದ್ದ ಯಡ್ತರೆ ಮಂಜಯ್ಯ ಶೆಟ್ಟಿ ಪ್ರಯತ್ನದಿಂದ 1962ರಲ್ಲಿ 10 ಎಕರೆ ಪ್ರದೇಶದಲ್ಲಿ ‘ಮಲ್ನಾಡ್ ಹೈಸ್ಕೂಲ್’ ಆರಂಭವಾಗಿತ್ತು. 1984-85ನೇ ಸಾಲಿನಲ್ಲಿ ಪದವಿ ಪೂರ್ವ ವಿಭಾಗ ಆರಂಭವಾಯಿತು. ಶಿಕ್ಷಣ ದೇಗುಲಕ್ಕೆ ಅಗತ್ಯವಾಗಿರುವ ಹಾಗೂ ಸುತ್ತಮುತ್ತಲ ಜನರ ಸಾಂಸ್ಕೃತಿಕ ಚಟುವಟಿಕೆಗೆ ಬೇಕಾಗಿರುವ ಸಾಂಸ್ಕೃತಿಕ ಸಭಾಭವನದ ನಿರ್ಮಾಣ ಹಳೆ ವಿದ್ಯಾರ್ಥಿ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಬಿ.ಎನ್.ಶೆಟ್ಟಿ ನೇತೃತ್ವದಲ್ಲಿ ನಡೆಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಇದಕ್ಕೆ ಬೆನ್ನೆಲುಬು ಆಗಿ ನಿಂತರು.
ಹೊಳ್ಳಗೆ ವಿನೋದ ಶೆಟ್ಟಿ ಅವರ ಹೆಸರಿನಲ್ಲಿ ₹ 75 ಲಕ್ಷ ದೇಣಿಗೆ ನೀಡಿದವರು ಅವರ ಪತಿ, ಅಮೆರಿಕದ ಎಂಜಿನಿಯರ್ ಹಲ್ನಾಡು ರವಿ ಎಸ್.ಶೆಟ್ಟಿ. ಆ ಮೊತ್ತ ಲಭಿಸಿದ ನಂತರ ಉತ್ಸಾಹಿತರಾದ ಸಮಿತಿಯವರು 4,600 ಚದರ ಅಡಿ ವಿಸ್ತೀರ್ಣದ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. 38 ಮಂದಿ ಹಳೆ ವಿದ್ಯಾರ್ಥಿಗಳು ಕೈಜೋಡಿಸಿದರು. ಭವನದಲ್ಲಿ ವಾಚನಾಲಯ, ಪ್ರಯೋಗಾಲಯ, ಡಿಜಿಟಲ್ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಇ-ಕಲಿಕೆ, ಯೋಗ, ಕಂಪ್ಯೂಟರ್, ಕೌಶಲಾಭಿವೃದ್ಧಿ ತರಬೇತಿಗೆ ಸ್ಥಳಾವಕಾಶ ಇದೆ.
ಸಾಂಸ್ಕೃತಿಕ ಸಭಾ ಭವನ ಮೇ 10ರಂದು ಉದ್ಘಾಟನೆ ಆಗಲಿದೆ. ಯಡ್ತರೆ ಮಂಜಯ್ಯ ಶೆಟ್ಟಿ ಅವರ ಪುತ್ಥಳಿ ಅನಾವರಣ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಚೇರಿ ಉದ್ಘಾಟನೆಯೂ ಅಂದೇ ನಡೆಯಲಿದೆ. ಎಲ್ಲದಕ್ಕೂ ಸರ್ಕಾರದ ಕಡೆಗೆ ನೋಡಬಾರದು. ಶಾಲೆ ಹಾಗೂ ಊರು ಬೆಳೆಸಲು ಸಹಾಯ ಮಾಡಬೇಕು. ಇಲ್ಲಿ ನಡೆದಿರುವ ಉತ್ತಮ ಕಾರ್ಯ ಬೇರೆ ಊರಿನ ಶಿಕ್ಷಣಾಸಕ್ತರಿಗೂ ಪ್ರೇರಣೆಯಾದರೆ ಖುಷಿ ಎಂದು ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಎನ್.ಶೆಟ್ಟಿ ಅವರು ತಿಳಿಸಿದರು.