
ಚಿಕ್ಕಬಳ್ಳಾಪುರ: ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಹಾಗೂ ದಾನಿಗಳ ನೆರವು ದೊರೆತಿದ್ದು, ಉತ್ತಮ ಸರ್ಕಾರಿ ಶಾಲೆಯಾಗಿ ಹೊರಹೊಮ್ಮಿದೆ. ತಾಲ್ಲೂಕಿನ ಕಸಬಾ ಹೋಬಳಿಯ ದೇವರಗುಡಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 100 ಮಂದಿ ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಇದರಿಂದ ಗ್ರಾಮದ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸದೆ ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ. ಜೊತೆಗೆ ಶಾಲೆಗಳಿಗೆ ದಾನಿಗಳ ಮಹಾಪೂರವೇ ಹರಿದು ಬಂದಿದೆ.

j3tvkannada
ಗ್ರಾಮದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿಸಲು ಹಳೆ ವಿದ್ಯಾರ್ಥಿಗಳು ಸಹಾಯಹಸ್ತ ಚಾಚಿದ್ದಾರೆ. ಜೊತೆಗೆ ಗ್ರಾಮಸ್ಥರು ಸಹ ಶಾಲೆಗೆ ಅಗತ್ಯವಿರುವ ಬ್ಯಾಂಡ್ಸೆಟ್, ಪ್ರಿಂಟರ್, ಕುರ್ಚಿ, ಟೇಬಲ್, ಪಾತ್ರೆಗಳನ್ನು ವಿತರಿಸಿದ್ದಾರೆ. ಕೆಲವರು ಪ್ರತಿವರ್ಷ ಉಚಿತವಾಗಿ ಪುಸ್ತಕ ವಿತರಿಸಿದ್ದಾರೆ. ಸಮರ್ಪಕ ಸೇವಾಟ್ರಸ್ಟ್ನಿಂದ ಹೈಟೆಕ್ ಮಾದರಿಯ ಶೌಚಾಲಯ ನಿರ್ಮಾಣವಾಗಿದೆ. ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಪ್ರೊಜೆಕ್ಟರ್, ಎಲ್.ಇ.ಡಿ .ಟಿವಿ ಪರದೆ ದೇಣಿಗೆ ನೀಡಿದ್ದಾರೆ. ಸರ್ಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳ ಅವಶ್ಯವಿದ್ದು, ಶಾಲೆಯ ಪಕ್ಕದಲ್ಲಿನ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಶಾಲಾ ತರಗತಿಗಳನ್ನು ಮಾಡಲಾಗುತ್ತಿದೆ. 4 ಮತ್ತು 5ನೇ ತರಗತಿಯ ಮಕ್ಕಳಿಗೆ ಡೆಸ್ಕ್ ವ್ಯವಸ್ಥೆ, ಹಾಗೂ ಶಾಲೆಗೆ ಸುಣ್ಣ ಬಣ್ಣ ಮಾಡಿಲಾಗಿದೆ.

j3tvkannada
ಶಾಲಾ ಕೊಠಡಿಗಳ ಮೇಲೆ ಚಿತ್ರಗಳು, ಅಂಕಿಗಳು, ಕಾಗುಣಿತ, ಅಕ್ಷರಮಾಲೆ, ಪಕ್ಷಿ, ಪ್ರಾಣಿಗಳ ಚಿತ್ರಗಳನ್ನು ಬರೆಯಲಾಗಿದ್ದು ಆಕರ್ಷಿಣೀಯವಾಗಿವೆ. ಶಾಲಾ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಆಂದೋಲನ ನಡೆಸಿ ಶಾಲೆಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಶಾಲಾ ಮುಂಭಾಗದಲ್ಲಿ ಉತ್ತಮವಾದ ಕೈತೋಟವಿದ್ದು, ಗಿಡ, ಮರಗಳ ನೆರಳಿನಲ್ಲಿ ಪಾಠ ಪ್ರವಚನ ಬೋಧನೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಗುಣಾತ್ಮಕ ಶಿಕ್ಷಣ ಕೊಡುತ್ತಿದ್ದು, ನವೋದಯ, ಮೊರಾರ್ಜಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾರೆ. ಜೊತೆಗೆ ಶಾಲೆಯಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುವ ಮೂಲಕ ಉತ್ತಮ ವಾತಾವರಣವಿದೆ.