
ಕೋಲಾರ: ಮುಸ್ಲಿಂ ಧರ್ಮಗುರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಗರದ ಗಾಂಧಿವನ ಬಳಿ ಮಂಗಳವಾರ ಸಾವಿರಾರು ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.

j3tvkannada
ಗಾಂಧಿವನದ ಮುಂಭಾಗದಿಂದ ಹಿಡಿದು ಎಂ.ಜಿ.ರಸ್ತೆಯಲ್ಲೂ ಪ್ರತಿಭಟನೆಗೆ ಜಮಾಯಿಸಿದ ಸಮುದಾಯದ ಯುವಕರು ಭ್ರಷ್ಟ, ಕೋಮುವಾದಿ, ಜನ ವಿರೋಧಿ ಯತ್ನಾಳ ಎಂದು ಘೋಷಣೆ ಕೂಗಿದರು. ಭಿತ್ತಿಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಬಂಧಿಸಿ ಬಂಧಿಸಿ ಯತ್ನಾಳ ಬಂಧಿಸಿ ಎಂದು ಕೂಗಿದರು.
‘ನಮ್ಮ ಪ್ರವಾದಿ ನಮ್ಮ ಹೆಮ್ಮೆ. ನಮ್ಮದು ಶಾಂತಿಯ ಹೆಜ್ಜೆ’ ಎಂದು ಹೇಳಿದರು. ‘ಪ್ರವಾದಿಯವರು ಯತ್ನಾಳಗೆ ಏನು ಮಾಡಿದ್ದಾರೆ? ಅವರ ಕುರಿತು ಕೆಟ್ಟದಾಗಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ಮಧ್ಯಾಹ್ನದಿಂದಲೇ ಮುಸ್ಲಿಮರು ತಮ್ಮ ಅಂಗಡಿ ಬಾಗಿಲು ಮುಚ್ಚಿ ಪ್ರತಿಭಟನೆಗೆ ಧಾವಿಸಿದರು.
ಮುಸ್ಲಿಂ ಮುಖಂಡರು ಮಾತನಾಡಿ, ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಈ ಹಿಂದೆಯೂ ಮುಸ್ಲಿಮರನ್ನು ಹಾಗೂ ಧರ್ಮವನ್ನು ಯತ್ನಾಳ ನಿಂದಿಸಿ ಮಾತನಾಡಿದ್ದಾರೆ. ಈಗ ಮತ್ತೆ ಅವಹೇಳನ ಮಾಡಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ವಾತಾವರಣವಿದೆ. ಹಿಂಸಾಚಾರ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಈ ಕೂಡಲೇ ವಿಜಯಪುರ ಶಾಸಕ ಯತ್ನಾಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಂತಹ ಘಟನೆಗಳು ಮುಂದೆ ಯಾವುದೇ ಕಾರಣಕ್ಕೂ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

‘ಪ್ರವಾದಿ ಕುರಿತು ಯಾರೇ ಒಂದು ಕೆಟ್ಟ ಪದ ಬಳಸಿದರೂ ಅದನ್ನು ಕೇಳುವ ಶಕ್ತಿ ನಮ್ಮಲ್ಲಿ ಇಲ್ಲ. ಆ ರೀತಿ ಹೇಳಲೂ ನಾವು ಬಿಡುವುದಿಲ್ಲ. ಪ್ರವಾದಿ ನಮಗೆ ಒಳ್ಳೆಯ ದಾರಿ ತೋರಿಸಿದ್ದಾರೆ. ನಾವು ಯಾವುದೇ ಧರ್ಮದ ಗುರುಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ನಮ್ಮ ಧರ್ಮದ ವಿರುದ್ಧವೂ ಕೆಟ್ಟದಾಗಿ ಮಾತನಾಡಬಾರದು. ಯಾವುದೇ ಧರ್ಮದ ವಿರುದ್ಧ ಅವಹೇಳನ ಮಾಡದಂತೆ ಕಾನೂನು ರೂಪಿಸಬೇಕು’ ಎಂದು ಆಗ್ರಹಿಸಿದರು.
ಈ ಸಂಬಂಧ ಹಜ್ರತ್ ಖುತುಬ್ ಫೌರಿ ದರ್ಗಾ ಮತ್ತು ಸಹ ಸಂಸ್ಥೆಗಳ ಸೈಯದ್ ಅಮಾನುಲ್ಲಾ ಎಂಬುವವರು ನಗರ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದು, ಯತ್ನಾಳರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕೋಲಾರ ತಹಶೀಲ್ದಾರ್ ನಯನಾ ಬಂದು ಮನವಿ ಸ್ವೀಕರಿಸಿದರು. ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಕೋಲಾರ ಉಪವಿಭಾಗದ ಡಿ.ವೈ.ಎಸ್ಪಿ ಎಂ.ಎಚ್.ನಾಗ್ಲೆ ಹಾಗೂ ನಗರ ಪೊಲೀಸ್ ಠಾಣೆಯ ಸಿ.ಪಿ.ಐ ಸದಾನಂದ ಜೊತೆಗಿದ್ದರು. ಪ್ರತಿಭಟನೆಯಲ್ಲಿ ಉಲೇಮಾಗಳಾದ ಮೌಲ್ವಿ ಅತೀಖ್ ಉರ್ ರೆಹಮಾನ್, ಮೌಲಾನ ಕಲೀಂ ಉಲ್ಲಾ, ಮೌಲ್ವಿ ಅಲೀ ಹಸನ್, ಮೌಲಾನ ಷಫಿ ಉರ್ ರೆಹಮಾನ್, ಮುಸ್ಲಿಂ ಮುಖಂಡರು ಹಾಗೂ ಯುವಕರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಹಿಂದೂ ಮುಸ್ಲಿಂ ಒಟ್ಟಾಗಿ ಸಾಗೋಣ ‘ಹಿಂದೂ ಮುಸ್ಲಿಂ ಒಟ್ಟಾಗಿ ಸಾಗೋಣ. ನಾವೆಲ್ಲಾ ಅಣ್ಣ ತಮ್ಮಂದಿರು. ನಾವೆಲ್ಲಾ ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದೇವೆ. ನಾವು ಭಾರತವನ್ನು ತುಂಬಾ ಪ್ರೀತಿಸುತ್ತೇವೆ. ಆದರೆ ಕೆಲ ಕೆಟ್ಟ ಮನುಷ್ಯರು ವಾತಾವರಣ ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದರು.