
ಧಾರವಾಡ :ಈಗಾಗಲೇ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ದಾಂಗುಡಿ ಇಟ್ಟಿವೆ. ಆಪೂಸ್ ಹಣ್ಣಿಗೆ ಬಹಳ ಬೇಡಿಕೆಯಿದ್ದು, ಡಜನ್ಗೆ 300ರಿಂದ 800 ರೂ. ವರೆಗೆ ದರವಿದೆ. ಸೀಸನ್ ನ ಆರಂಭದಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದರಿಂದ ಸ್ವಲ್ಪ ಮಟ್ಟಿಗೆ ಬೆಳೆ ಹಾನಿಯಾಗಿದೆ.

j3tvkannada
ಹಣ್ಣುಗಳ ರಾಜ ಮಾವಿನ ಹಣ್ಣು ಧಾರವಾಡ ಮಾರುಕಟ್ಟೆಗೆ ದಾಂಗುಡಿ ಇಟ್ಟಿದೆ. ಬಗೆ ಬಗೆಯ ಮಾವಿನ ಹಣ್ಣುಗಳು ಮಾವು ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ. ಅರೆ ಮಲೆನಾಡು ಧಾರವಾಡ ಜಿಲ್ಲೆಯಲ್ಲಿ ಮಾವಿನ ಹಣ್ಣುಗಳ ದರ್ಬಾರ್ ಜೋರಾಗಿಯೇ ಇದೆ. ಧಾರವಾಡದ ಸೂಪರ್ ಮಾರುಕಟ್ಟೆ, ಅಕ್ಕಿಪೇಟೆ, ಟಿಕಾರೆ ರಸ್ತೆ, ಗಾಂಧಿ ಚೌಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕಲಮಿ, ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ತಳಿಯ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ.
ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನಲ್ಲಿ ಮಾವು ಬೆಳೆಗಾರರು ಅಧಿಕವಾಗಿದ್ದಾರೆ. ಅವರೂ ಮಾವು ಫಸಲನ್ನೇ ನಂಬಿ ಜೀವನ ಸಾಗಿಸುತ್ತಾರೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯ ಸಂಕಷ್ಟ, ರೋಗಬಾಧೆಯ ಮಧ್ಯೆಯೂ ಉತ್ತಮವಾಗಿ ಬೆಳೆದ ಮಾವಿನ ಹಣ್ಣುಗಳು ಧಾರವಾಡ ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಲ ರೈತರು ಉತ್ತಮವಾಗಿಯೇ ನಿರ್ವಹಣೆ ಮಾಡಿ ಉತ್ತಮ ಫಸಲು ಪಡೆದಿದ್ದಾರೆ. ಆದರೆ ಮಾವಿನ ಹಣ್ಣಿನ ಬೆಲೆ ಮಾತ್ರ ಗಗನಕ್ಕೇರಿದೆ.