

ಹಾವೇರಿ : ಜಿಲ್ಲೆಯ ಶಿಗ್ಗಾವಿಯಲ್ಲಿ ಕಸದ ಬುಟ್ಟಿಯಲ್ಲಿ ಮಂಗಳವಾರ ಪತ್ತೆಯಾಗಿದ್ದ ನವಜಾತ ಹೆಣ್ಣು ಶಿಶುವೊಂದು ಚಿಕಿತ್ಸೆಗೆ ಸ್ಪಂದಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಶಿಗ್ಗಾವಿಯ ಜಯನಗರದಲ್ಲಿರುವ ಶಂಕ್ರಗೌಡ್ರ ಚಾಳದ ಹಿಂದಿನ ರಸ್ತೆ ಬದಿ ಕಸ ಎಸೆಯುವ ಜಾಗದಲ್ಲಿ ಮಂಗಳವಾರ ಹೆಣ್ಣು ಶಿಶು ಪತ್ತೆಯಾಗಿತ್ತು. ಅದನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅದು ಮೃತಪಟ್ಟಿದೆ ಎಂದು ಶಿಗ್ಗಾವಿ ಪೊಲೀಸರು ಹೇಳಿದರು. ಹೆಣ್ಣು ಶಿಶುವನ್ನು ಯಾರೋ ಎಸೆದು ಹೋಗಿದ್ದಾರೆ. ಮಗುವಿನ ಅಳುವಿನ ಶಬ್ದ ಕೇಳಿ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದರು. ಶಿಶುವಿನ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರೊಬ್ಬರು, ಶಿಶು ಸಿಕ್ಕ ಸಂದರ್ಭದಲ್ಲಿ ಉಸಿರಾಡುತ್ತಿತ್ತು. ಅದು ಬದುಕಬಹುದೆಂಬ ಆಸೆಯಿತ್ತು ಎಂದರು.