
ಚಿಕ್ಕಬಳ್ಳಾಪುರ : ಐತಿಹಾಸಿಕ ಮತ್ತು ರಾಜ್ಯದಲ್ಲಿಯೇ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ತಾಲ್ಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯ, ದೇಶದ ನಾನಾ ಭಾಗಗಳ ಜನರಷ್ಟೇ ಅಲ್ಲ ವಿದೇಶಿ ಪ್ರವಾಸಿಗರನ್ನೂ ನಂದಿಗಿರಿಧಾಮ ಸೆಳೆಯುತ್ತಿದೆ. ಈಗ ಪ್ರವಾಸಿಗರು ಗಿರಿಧಾಮದಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡುವ ಮತ್ತು ದೇಸಿ ಆಟಗಳನ್ನು ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ದೇಸಿ ಆಟಗಳನ್ನು ಗಿರಿಧಾಮದಲ್ಲಿ ಆಡಿಸುತ್ತಿದೆ. ಈ ಆಟಗಳೂ ಅಷ್ಟೇ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿದೆ. ಚಿಕ್ಕಮಕ್ಕಳು, ಪ್ರೌಢರು, ವೃದ್ಧರು ಹೀಗೆ ಎಲ್ಲರೂ ದೇಸಿ ಆಟಗಳಿಗೆ ಮನಸೋತು, ಗಿರಿಧಾಮದ ಪ್ರಕೃತಿ ಆಹ್ಲಾದಿಸುವ ಜೊತೆಗೆ ಆಟಗಳಲ್ಲಿಯೂ ತೊಡಗುತ್ತಿದ್ದಾರೆ. ಕೆ.ಎಸ್.ಟಿ.ಡಿಸಿಯು ಗಿರಿಧಾಮದ ಮಯೂರ ಫೈನ್ಟಾಪ್ ಮತ್ತು ಯೋಗ ನಂದೀಶ್ವರ ದೇಗುಲದ ಮುಂಭಾಗದ ಖಾಲಿ ಜಾಗಗಳಲ್ಲಿ ಚಿನ್ನಿದಾಂಡು, ಅಳಗುಳಿ ಮಣೆ, ಪಗಡೆ, ಚೌಕಾಬಾರ, ಕುಂಟೆ ಬಿಲ್ಲೆ, ಬುಗುರಿ, ವಿವಿಧ ಮಾದರಿಯ 40 ಬಗೆಯ ಪಗಡೆ ಆಟಗಳನ್ನು ಆಡಿಸುತ್ತಿದೆ. ಈ ಆಟಗಳಿಗೆ ಅಗತ್ಯವಿರುವ ಪರಿಕರಗಳೂ ಇಲ್ಲಿವೆ.

ಸದ್ಯ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 7ರಿಂದ ಸಂಜೆಯವರೆಗೂ ಇಲ್ಲಿ ಈ ದೇಸಿ ಆಟಗಳನ್ನು ಆಡಿಸಲಾಗುತ್ತದೆ. ಫೆಬ್ರುವರಿಯಿಂದ ಪ್ರಾಯೋಗಿಕವಾಗಿ ಈ ಆಟಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ವಾರದ ಎಲ್ಲ ದಿನಗಳಲ್ಲಿಯೂ ದೇಸಿ ಆಟಗಳನ್ನು ಆಡಿಸಲು ಪ್ರವಾಸೋದ್ಯಮ ಇಲಾಖೆ ಆಲೋಚಿಸುತ್ತಿದೆ. ಗಿರಿಧಾಮಕ್ಕೆ ಬರುವ ವಿದೇಶಿಯರೂ ಈ ಆಟದ ಗಮ್ಮತ್ತಿನಲ್ಲಿ ಭಾಗಿ ಆಗುತ್ತಿದ್ದಾರೆ. ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸಲಿ ಮತ್ತು ವಿಶಿಷ್ಟವಾದ ಅನುಭವ ನೀಡಲಿ ಎನ್ನುವ ಉದ್ದೇಶದಿಂದ ಈ ದೇಸಿ ಮತ್ತು ಗ್ರಾಮೀಣ ಆಟಗಳನ್ನು ಆಡಿಸಲಾಗುತ್ತಿದೆ. ಸಾಂಸ್ಕೃತಿಕ ಪ್ರವಾಸೋದ್ಯಮದ ಭಾಗವಾಗಿಯೂ ಈ ಆಟಗಳನ್ನು ಕಾಣಬಹುದು. ಬಹಳಷ್ಟು ಮಕ್ಕಳಿಗೆ ಅಳಗುಳಿ ಮನೆ, ಗಿಲ್ಲಿ ದಾಂಟು, ಪಗಡೆ ಆಟಗಳ ಪರಿಚಯ ಇರುವುದಿಲ್ಲ. ರಾಜಮಹಾರಾಜರ ಕಾಲದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಆಟಗಳನ್ನು ಅಡುತ್ತಿದ್ದರು. ಚೌಕಾಬಾರದಲ್ಲಿಯೇ 100ಕ್ಕೂ ಹೆಚ್ಚು ರೀತಿಯ ಆಟಗಳು ಇವೆ. ಮೈಸೂರು ರಾಜರು, ಹೊಯ್ಸಳ ರಾಜರು ಹೀಗೆ ಬೇರೆ ಬೇರೆ ರಾಜರ ಕಾಲದ ಆಟಗಳೇ ಬಗೆ ಬಗೆಯಲ್ಲಿ ಇವೆ. ಈ ಎಲ್ಲ ಆಟಗಳನ್ನು ಇಲ್ಲಿ ಆಡಬಹುದು ಎನ್ನುತ್ತಾರೆ ಪ್ರವಾಸೋದ್ಯಮ ಮತ್ತು ಕೆ.ಎಸ್.ಟಿ.ಡಿಸಿ ಅಧಿಕಾರಿಗಳು.

ಸಾಮಾನ್ಯವಾಗಿ ಗಿರಿಧಾಮಕ್ಕೆ ಬರುವವರು ಸೂರ್ಯಾಸ್ತ, ಸೂರ್ಯೋದಯ ವೀಕ್ಷಣೆ, ಉದ್ಯಾನದಲ್ಲಿನ ಪ್ರಕೃತಿಯ ಆಹ್ಲಾದಕ್ಕೆ ಭೇಟಿ ನೀಡುತ್ತಾರೆ. ಹೀಗೆ ಬಂದವರಿಗೆ ಏಕತಾನತೆ ಎನಿಸಬಾರದು. ಆದ ಕಾರಣ ಅವರು ತೊಡಗಲು ಈ ಆಟಗಳನ್ನು ಆಡಿಸಲಾಗುತ್ತಿದೆ ಎನ್ನುತ್ತಾರೆ. ಮಕ್ಕಳನ್ನು ಪ್ರಮುಖವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡು ಕಾರ್ಯಾರಂಭ ಮಾಡಲಾಯಿತು. ಆದರೆ ಹಿರಿಯರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಅವರೂ ಆಟಗಳಲ್ಲಿ ಭಾಗಿ ಆಗುತ್ತಿದ್ದಾರೆ. ಬಹಳಷ್ಟು ಮಂದಿ ಇಲ್ಲಿರುವ ಪುಸ್ತಕದಲ್ಲಿ ಆಟದ ಅನುಭವಗಳನ್ನೂ ದಾಖಲಿಸಿದ್ದಾರೆ.

ತಮ್ಮ ಕಾಲದ ಆಟಗಳು ಮತ್ತು ಈ ಆಟಗಳ ಬಗ್ಗೆ ಬರೆದಿದ್ದಾರೆ ಎಂದು ತಿಳಿಸುವರು. ಮಕ್ಕಳಲ್ಲಿ ಕೌಶಲಗಳೂ ಈ ಆಟಗಳ ಮೂಲಕ ಬೆಳೆಯುತ್ತದೆ. ತಮಿಳುನಾಡು, ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರು ತಮ್ಮಲ್ಲಿನ ಆಟಗಳ ಬಗ್ಗೆ ಮಾಹಿತಿ ನೀಡುವರು. ಇದೇ ಆಟದ ಪರಿಕರಗಳನ್ನು ಬಳಸಿ ಅವರು ಮತ್ತೊಂದು ಆಟಗಳನ್ನು ತೋರುವರು. ಹೀಗೆ ಆಟಗಳ ಮಾಹಿತಿ ವಿನಿಮಯಕ್ಕೂ ಇದು ವೇದಿಕೆ ಆಗಿದೆ ಎಂದು ಅಧಿಕಾರಿಗಳು ವಿವರಿಸುವರು. ಪ್ರವಾಸಿಗರಿಂದ ಮೆಚ್ಚುಗೆ ‘ಗಿರಿಧಾಮಕ್ಕೆ ಬರುತ್ತಿರುವ ಪ್ರವಾಸಿಗರಿಂದ ಈ ಆಟಗಳ ಬಗ್ಗೆ ಭಾರಿ ಮೆಚ್ಚುಗೆ ಇದೆ. ಬಹಳಷ್ಟು ಮಂದಿ ಸ್ವಯಂಪ್ರೇರಿತರಾಗಿ ತೊಡಗುತ್ತಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸುವರು. ಪ್ರವಾಸಿಗರಿಂದ ಆಟಗಳಿಗೆ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ವಿದೇಶಿಯರು ಮತ್ತು ನಮ್ಮವರು ಕುಳಿತು ಚೌಕಾಬಾರ ಆಟವಾಡಿದ್ದಾರೆ ಎನ್ನುವರು.