
ತುಮಕೂರು : “ಅಕ್ಕತಂಗಿ ಕೆರೆ” ನೀರು ಪ್ರಾಣಿ-ಪಕ್ಷಿ, ದನ-ಕರು ಕುಡಿದರೂ ಅವು ಜೀವ ಬಿಡುತ್ತವೆ. ಅಷ್ಟರ ಮಟ್ಟಿಗೆ ನೀರು ಕಲುಷಿತಗೊಂಡಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್ಮೂರ್ತಿ ಬೇಸರ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆಯ 22ನೇ ವಾರ್ಡ್ ವ್ಯಾಪ್ತಿಗೆ ವಿದ್ಯಾನಗರ, ಭಾರತಿ ನಗರ, ವಾಲ್ಮೀಕಿ ನಗರ, ಹೊಸಯ್ಯನಪಾಳ್ಯ, ಬಟವಾಡಿ, ಎಪಿಎಂಸಿ ಹಿಂಭಾಗ, ಚೌಡೇಶ್ವರಿ ನಗರ ಪ್ರದೇಶಗಳು ಸೇರುತ್ತವೆ. ವಿದ್ಯಾನಗರಕ್ಕೆ ಹೊಂದಿಕೊಂಡಂತೆ ಇರುವ ಅಕ್ಕತಂಗಿ ಕೆರೆ ಯುಜಿಡಿ ನೀರು ತುಂಬಿಕೊಂಡು ಗಬ್ಬು ವಾಸನೆ ಬೀರುತ್ತಿದೆ. ಮಳೆಗಾಲದಲ್ಲಿ ಕೆರೆ ತುಂಬಿದರೆ ಇದೇ ನೀರು ಅಮಾನಿಕೆರೆಗೆ ಹರಿಯುತ್ತದೆ. ಐತಿಹಾಸಿಕ ಕೆರೆ ಉಳಿಸಿಕೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುವುದು ಈ ಭಾಗದ ಜನರ ಪ್ರಬಲ ಆರೋಪ. 90.32 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ನಾಲೈದು ಎಕರೆ ಒತ್ತುವರಿಯಾಗಿದೆ. ಒಂದಷ್ಟು ಪ್ರದೇಶ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೂ ಬಳಕೆಯಾಗಿದೆ. ಕೆರೆಯ ಒಂದು ಭಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. 15 ಎಕರೆಯಲ್ಲಿ ‘ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ’ ನಿರ್ಮಿಸಲಾಗಿದೆ. ಕೆರೆಯ ಭಾಗ ಸಮತಟ್ಟುಗೊಳಿಸಿ ಪಾರ್ಕ್ ನಿರ್ಮಿಸಲು ಅವಕಾಶ ಕಲ್ಪಿಸುವ ಪಾಲಿಕೆ ಅಧಿಕಾರಿಗಳು, ನಗರ ಪ್ರದೇಶದಲ್ಲಿ ಇರುವ ಪಾರ್ಕ್ ರಕ್ಷಣೆಗೆ ಮಾತ್ರ ಪರಿಣಾಮಕಾರಿಯಾದ ಕ್ರಮಕೈಗೊಳ್ಳುತ್ತಿಲ್ಲ ಎಂದು ವಿದ್ಯಾನಗರ ಮಂಜುನಾಥ್ ಆರೋಪಿಸಿದರು.

ವಿದ್ಯಾನಗರ, ಚೌಡೇಶ್ವರಿ ನಗರದಲ್ಲಿ ಸಾರ್ವಜನಿಕ ಪಾರ್ಕ್ಗಳು ಒತ್ತುವರಿಯಾಗಿದ್ದು, ತೆರವುಗೊಳಿಸಿ ಬೇಲಿ ಹಾಕಿಲ್ಲ. ಉದ್ಯಾನ ಮುಳ್ಳಿನ ಪೊದೆಯಂತಾಗಿದೆ. ನಾಮಫಲಕ ಅಳವಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಿಲ್ಲ. ವಿದ್ಯಾನಗರದ ಕೆಲವು ಕಡೆ ಹೊರೆತುಪಡಿಸಿದರೆ ಬಹುತೇಕ ಕಡೆ ಸುಸಜ್ಜಿತ ರಸ್ತೆ ನಿರ್ಮಿಸಿದ್ದು, ಹಂಪ್ ಅಳವಡಿಸಿಲ್ಲ. ಇದರಿಂದ ವಾಹನಗಳ ವೇಗಕ್ಕೆ ಮಿತಿ ಇಲ್ಲದಂತಾಗಿದೆ. ವಿದ್ಯುತ್ ಕಂಬಗಳಿಗೆ ಹಬ್ಬಿರುವ ಬಳ್ಳಿ ತೆರವುಗೊಳಿಸಿಲ್ಲ. ಕಂಬಗಳ ಬಳಿ ಹಾವು, ಚೇಳು, ಮುಂಗುಸಿ ಸೇರಿಕೊಂಡಿವೆ. ಕೆಲವೊಮ್ಮೆ ಮನೆಯ ಒಳಗೆ ಬರುತ್ತಿವೆ. ಅನೇಕ ಸಲ ಹಾವು ಕಚ್ಚಲು ಬಂದಾಗ ತಪ್ಪಿಸಿಕೊಂಡಿದ್ದೇವೆ. ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರೆ ‘ಬೆಂಕಿ ಹಚ್ಚಿ ಸುಟ್ಟು ಹೋಗುತ್ತದೆ’ ಎನ್ನುತ್ತಾರೆ. ಪರಿಸರ ಸಂರಕ್ಷಣೆಗೆ ಶ್ರಮಿಸಬೇಕಾದ ಅಧಿಕಾರಿಗಳೇ ಪ್ರಕೃತಿ ಹಾಳು ಮಾಡುವ ಕೆಲಸ ಹೇಳಿ ಕೊಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಇತ್ತ ಗಮನ ಹರಿಸಿ ಕಂಬಕ್ಕೆ ಹರಡಿರುವ ಬಳ್ಳಿ ತೆಗೆದು ಹಾಕಬೇಕು’ ಎಂದು ಚೌಡೇಶ್ವರಿ ನಗರದ ಲಕ್ಷ್ಮಯ್ಯ ಒತ್ತಾಯಿಸಿದರು.
ಅಭಿವೃದ್ಧಿ ಆಗಿದ್ದೇನು?
* ಬಿ.ಎಚ್.ರಸ್ತೆ ವಿಸ್ತರಣೆ
* ಸಮರ್ಪಕ ವಿದ್ಯುತ್ ಸಂಪರ್ಕ
* ವಾರ್ಡ್ ವ್ಯಾಪ್ತಿಯಲ್ಲಿ ಚರಂಡಿ ಸಂಪರ್ಕ
* ರಸ್ತೆಗೆ ಡಾಂಬರೀಕರಣ
ಸಮಸ್ಯೆ ಏನೇನು?
* ಅಕ್ಕತಂಗಿ ಕೆರೆಗೆ ಯುಜಿಡಿ ತ್ಯಾಜ್ಯ
* ಅಮಾನಿಕೆರೆಗೆ ಕೊಳಚೆ ನೀರು
* ಬಹುತೇಕ ಕಡೆ ಸೊಳ್ಳೆ ಕಾಟ
* ಬೀದಿ ನಾಯಿ ಹಾವಳಿ

ಈ ಭಾಗದಲ್ಲಿ ಪ್ರತಿ ದಿನ ಕಸ ಸಂಗ್ರಹ ವಾಹನ ಸಂಚರಿಸಿದರೂ ಸಾರ್ವಜನಿಕರು ಕಸ ಸುರಿಯುತ್ತಿಲ್ಲ. ಬದಲಾಗಿ ರಸ್ತೆ ಬದಿ, ಖಾಲಿ ಜಾಗದಲ್ಲಿ ಕಸದ ರಾಶಿ ಹಾಕುತ್ತಿದ್ದಾರೆ. ಮಳೆ ಬಂದರೆ ಅದು ಕೆಟ್ಟ ವಾಸನೆ ಬೀರುತ್ತದೆ. ಮನೆಯಿಂದ ಹೊರ ಬರಲು ಆಗುವುದಿಲ್ಲ. ಕಸ ಹಾಕಿದರೆ ದಂಡ ವಿಧಿಸಲಾಗುವುದು ಎಂದು ಬೋರ್ಡ್ ಹಾಕಿದ ಕಡೆಯೇ ಕಸ ಸುರಿಯುತ್ತಾರೆ. ಇದಕ್ಕೆ ಕಡಿವಾಣ ಬೀಳಬೇಕು. ಮನೆಯ ಮುಂದೆ ಯುಜಿಡಿ ಸೋರಿಕೆಯಾದರೆ ವಾರ ಕಳೆದರೂ ಸರಿಪಡಿಸಲ್ಲ. ಇದುವರೆಗೆ ಸರಿಯಾದ ರಸ್ತೆ ಹಾಕಿಲ್ಲ. ಕಸ ಸಂಗ್ರಹ ವಾಹನ, ಪೌರ ಕಾರ್ಮಿಕರು ಈ ಕಡೆ ಬರುವುದಿಲ್ಲ. ಪಾಲಿಕೆ ಸದಸ್ಯರು ತಮ್ಮ ಅಧಿಕಾರಾವಧಿ ಮುಗಿದ ನಂತರ ಇತ್ತ ಓಡಾಡುತ್ತಿಲ್ಲ. ಜನರ ಸಮಸ್ಯೆ ಏನು ಅಂತ ಕೇಳುವವರು ಇಲ್ಲದಂತಾಗಿದೆ. ನನ್ನ ಅಧಿಕಾರಾವಧಿಯಲ್ಲಿ ವಾರ್ಡ್ ವ್ಯಾಪ್ತಿಯ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಶ್ರಮಿಸಿದ್ದೇನೆ. ವಾಲ್ಮೀಕಿ ನಗರ, ಬಟವಾಡಿ ಭಾಗದಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಚರಂಡಿ ಸಂಪರ್ಕವೂ ಸಮರ್ಪಕವಾಗಿದೆ. ಜನರಿಗೆ ಹೆಚ್ಚಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.