

ದಕ್ಷಿಣ ಕನ್ನಡ : ಮಳೆಗಾಲದಲ್ಲಿ ಪ್ರಕೃತಿಯು ಒಂದು ರೀತಿಯಾಗಿ ಕಂಡರೆ, ಬೇಸಿಗೆಯಲ್ಲಿ ಅದು ಇನ್ನೊಂದು ರೀತಿಯಲ್ಲಿ ಆಕರ್ಷಿಸುತ್ತದೆ. ಪ್ರಕೃತಿಯ ನೈಜ ಸುಂದರ ದೃಶ್ಯ ಕಾವ್ಯಗಳನ್ನು ಕೃತಕವಾಗಿ ನಿರ್ಮಿಸಲು ಎಷ್ಟೇ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡರೂ, ಅದು ನೂರು ಶೇಕಡಾ ಪೂರ್ಣಗೊಳ್ಳೋದು ಅನುಮಾನವೇ. ಇಲ್ಲೊಂದು ಪ್ರಕೃತಿಯ ಸೊಬಗನ್ನು ಸ್ವತಃ ಪ್ರಕೃತಿಯೇ ನಿರ್ಮಿಸಿಕೊಂಡಿದ್ದು, ಈ ಭಾಗದಿಂದ ಸಂಚರಿಸುವ ಜನ ಇಲ್ಲಿನ ಪ್ರಕೃತಿಯ ಸೊಬಗನ್ನು ಸವಿಯದೆ ತೆರಳುವವರು ವಿರಳ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪವಿರುವ ಕೊಡಂಗಾಯಿ ಎನ್ನುವ ಸ್ಥಳ. ಕಣ್ಣು ಹಾಯಿಸಿದ ಉದ್ದಕ್ಕೂ ಹಸಿರು. ಹಸಿರಿನ ಕೊನೆಯಲ್ಲಿ ದಟ್ಟ ಕಾಡುಗಳಿರುವ ಗುಡ್ಡಗಳ ಸಾಲು, ಈ ಹಸಿರಿನ ಮಧ್ಯೆ ಹರಿಯುವ ಹಸಿರಾದ ನೀರು. ಇದು ಕೊಡಂಗಾಯಿ ಎನ್ನುವ ಸ್ಥಳದ ಟ್ರೇಡ್ ಮಾರ್ಕ್.