
ಬಂಗಾರಪೇಟೆ: ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ ಬೆಳೆಸಬೇಕು. ಅದಕ್ಕಾಗಿ ಜನಪದ ಸಾಹಿತ್ಯದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಲಹೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘ಜಾನಪದ ಉತ್ಸವ-2025’ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿರುತ್ತಾರೆ. ತಾವು ಹುಟ್ಟಿ ಬೆಳೆದ ನಾಡಿನ ಕಲೆ-ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡು, ಅದನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದರು. ಕಾಲೇಜಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಕಾಲೇಜಿನ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ವಿದ್ಯಾರ್ಥಿಗಳು ಸಿದ್ಧಪಡಿಸಿದ ಧಾನ್ಯಗಳ ರಾಶಿಗೆ ಸಂಪ್ರಾದಾಯಿಕ ಪೂಜೆ ನೆರವೇರಿಸಲಾಯಿತು. ಜನಪದ ಆಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಚಿಂತಾಮಣಿಯ ಮುನಿರೆಡ್ಡಿ ಮತ್ತು ತಂಡದವರು ಜನಪದ ಗೀತೆಗಳ ಗಾಯನ ಸಾದರಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವೀರಗಾಸೆ ಕುಣಿತ ಪ್ರದರ್ಶಶಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿ ಮನರಂಜಿಸಿದರು. ಜಾನಪದ ಉತ್ಸವದ ಭಾಗವಾಗಿ ನಡೆಸಿದ್ದ ವಿವಿಧ ಜನಪದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಗೋವಿಂದ್, ಮುಖ್ಯಾಧಿಕಾರಿ ಸತ್ಯ ನಾರಾಯಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾರ್ಥಸಾರಥಿ, ಸಬ್ ಇನ್ಸ್ಪೆಕ್ಟರ್ ರಾಜಣ್ಣ, ಪ್ರಾಂಶುಪಾಲ ಡಾ.ಶಕುಂತಲಾ, ಡಾ.ದೇವರಾಜಪ್ಪ ಎಸ್.ಎನ್., ವೇಣುಗೋಪಾಲ್ ಆರ್, ಸತೀಶ್ ಬಿ.ಪಿ. ಪ್ರಸನ್ನ ಕುಮಾರ್, ಚಂದ್ರಶೇಖರ, ಧನಂಜಯ್, ಶ್ಯಾಮಲಾ, ಹಳೆಯ ವಿದ್ಯಾರ್ಥಿಗಳ ಸಂಘ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.