ಚಿಕ್ಕಬಳ್ಳಾಪುರ : ಜಿಲ್ಲೆಯ ಗುಡಿಬಂಡೆ ತಾಲೂಕಿನ ಭೋಗೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿವೆ. ಈ ಶಾಲೆಯಿಂದ ಗ್ರಾಮದಲ್ಲಿರುವ ಎಲ್ಲಾ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿತ್ತು. ಗ್ರಾಮದಲ್ಲಿ ಹೆಚ್ಚು ದಲಿತರು ಮತ್ತು ಬಡವರು ಇರುತ್ತಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುತ್ತಾರೆ, ಆದರೆ ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಂತೆ ಕಾಣಿಸುವುದಿಲ್ಲ.

ಮೇಲ್ಚಾವಣಿ ಬಿರುಕು ಬಿಟ್ಟ ಕೊಠಡಿಯಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಮಳೆಗಾಲದಲ್ಲಿ ಮೇಲ್ಚಾವಣಿ ಸೋರುತ್ತಿದ್ದರೂ ಮಕ್ಕಳಿಗೆ ಅದರಲ್ಲೇ ಪಾಠ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಚಾವಣಿ ಕುಸಿದರೆ ಅನಾಹುತ ನಡೆಯುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಶಿಕ್ಷಕರು ಹಾಗೂ ಮಕ್ಕಳ ಜೀವಕ್ಕೇನಾದರೂ ಅಪಾಯವಾದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.