
ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪಿ.ಯು.ಸಿ, ಐ.ಟಿ.ಐ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶ ನೀಡಿದ್ದಾರೆ.

j3tvkannada
ಜಿಲ್ಲೆಯ ಹಲವೆಡೆ ನದಿಗಳು ತುಂಬಿ ಹರಿಯುತ್ತಿದ್ದು, ಬೈಂದೂರಿನ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೆಲವು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇನ್ನು ಬೈಂದೂರು ತಾಲೂಕಿನಲ್ಲಿ ಎಡೆಬಿಡದೆ ಮಳೆಯಾಗಿದ್ದು, ಸೌಪರ್ಣಿಕಾ, ಸುಮನಾವತಿ, ಸಂಕದ ಗುಂಡಿ, ಎಡ ಮಾವಿನ ಹೊಳೆ ತುಂಬಿ ಹರಿದಿದೆ. ನದಿಗಳ ಪಾತ್ರ, ನಾಡ, ನಾವುಂದ, ಮರವಂತೆ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಆನಗಳ್ಳಿ, ಹಳಗೇರಿ ಮತ್ತು ಬಿಜೂರಿ ಪ್ರದೇಶಗಳಲ್ಲಿ ನೆರೆಯ ವಾತಾವರಣ ಸೃಷ್ಟಿಯಾಗಿದೆ. ಒಟ್ಟಾರೆಯಾಗಿ ವರುಣಾರ್ಭಟಕ್ಕೆ ಜಿಲ್ಲೆಯಾದ್ಯಂತ ಜನ ಜೀವನ ಅಸ್ತವ್ಯಸ್ತವಾಗಿದೆ.